ಕಳೆದ ಬಾರಿ ಸೋತ ಕ್ಷೇತ್ರಗಳಲ್ಲಿ ಈ ಬಾರಿ ಗೆಲ್ಲುವ ವಿಶ್ವಾಸವಿದೆ: ಡಾ.ಜಿ.ಪರಮೇಶ್ವರ್

Update: 2018-01-09 13:19 GMT

ಬೆಂಗಳೂರು, ಜ.9: ಕಳೆದ ಬಾರಿಯ ಚುನಾವಣೆಯಲ್ಲಿ ಸೋತಿರುವ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಈ ಬಾರಿ ಕಾಂಗ್ರೆಸ್‌ಗೆ ಉತ್ತಮ ಜನ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.

ಮಂಗಳವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಚುನಾವಣೆಯಲ್ಲಿ ಸೋತಿರುವ 100 ವಿಧಾನಸಭಾ ಕ್ಷೇತ್ರಗಳಲ್ಲಿ ಕೆಪಿಸಿಸಿ ವತಿಯಿಂದ ‘ಕಾಂಗ್ರೆಸ್ ಸಮಾವೇಶ’ ನಡೆಸಲು ಉದ್ದೇಶಿಸಲಾಗಿದೆ. ಈಗಾಗಲೆ 18 ಕ್ಷೇತ್ರಗಳಲ್ಲಿ ಸಮಾವೇಶ ನಡೆಸಲಾಗಿದ್ದು, ಜನತೆಯಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ತಿಳಿಸಿದರು.

ಫೆಬ್ರವರಿ ಮೊದಲ ವಾರದಲ್ಲಿ ಎಲ್ಲ 100 ಕ್ಷೇತ್ರಗಳಲ್ಲಿಯೂ ಸಮಾವೇಶಗಳನ್ನು ಪೂರ್ಣಗೊಳಿಸಲಾಗುವುದು. ಈ ಸಮಾವೇಶಗಳ ನಡುವೆ ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಹೆಚ್ಚು ಜನಮನ್ನಣೆ ಗಳಿಸುತ್ತಿದ್ದಾನೆ ಎಂದು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಗೆಲ್ಲುವ ಅಭ್ಯರ್ಥಿಯ ವೌಲ್ಯಮಾಪನ ನಡೆಸಲಾಗುತ್ತಿದ್ದು, ಟಿಕೆಟ್ ನೀಡುವ ಸಂದರ್ಭದಲ್ಲಿ ಪ್ರಮುಖ ಮಾನದಂಡವಾಗಲಿದೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಸಾಧನಾ ಸಮಾವೇಶಗಳಲ್ಲಿ ಸರಕಾರದ ಸಾಧನೆಗಳನ್ನು ಪ್ರಚಾರ ಮಾಡುವ ಜೊತೆಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ಬಗ್ಗೆಯೂ ಗಮನ ಕೊಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಿಜೆಟ್‌ಗಳ ಕುರಿತು ಆರ್ಥಿಕ ತಜ್ಞರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನೀರಾವರಿ, ಸಾಮಾಜಿಕ ನ್ಯಾಯ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. ನಾವು ಮಾಡಿರುವ ಎಲ್ಲ ಜನಪರ ಕಾರ್ಯಕ್ರಮಗಳನ್ನು ಜನತೆಗೆ ತಿಳಿಸಿ ಮತಗಳನ್ನು ಕೇಳಲಾಗುವುದು ಎಂದು ಅವರು ಹೇಳಿದರು.

ಆಧಾರ್ ಸೋರಿಕೆ ತಡೆಗಟ್ಟಿ: ದೇಶದ ಪ್ರತಿಯೊಬ್ಬ ಪ್ರಜೆಗೂ ರಾಷ್ಟ್ರೀಯ ಮಾನ್ಯತೆ ಸಿಗಲಿ ಎಂಬ ಕಾರಣಕ್ಕಾಗಿ ಆಧಾರ್ ಯೋಜನೆಯನ್ನು ಜಾರಿ ಮಾಡಲಾಯಿತು. ಮುಖ್ಯವಾಗಿ ಜನತೆಯಿಂದ ಸಂಗ್ರಹಿಸಿರುವ ಖಾಸಗಿ ವಿಷಯಗಳನ್ನು ಗೌಪ್ಯವಾಗಿಡುವುದು ಈ ಯೋಜನೆಯ ಬಹುಮುಖ್ಯವಾದ ಅಂಶವಾಗಿದೆ. ಆದರೆ, ಕೇಂದ್ರದ ಬಿಜೆಪಿ ಸರಕಾರ ಜನತೆಯ ಖಾಸಗಿ ವಿಷಯವನ್ನು ಮಾರಾಟ ಮಾಡುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಆಧಾರ್ ಸೋರಿಕೆ ಕುರಿತು ವರದಿ ಮಾಡಿದ ಪತ್ರಕರ್ತೆಯ ಮೇಲೆ ದೂರು ದಾಖಲಿಸುವ ಮೂಲಕ ಕೇಂದ್ರ ಸರಕಾರ ಮತ್ತೊಂದು ತಪ್ಪೆಸಗಿದೆ. ಈ ಕೂಡಲೇ ಪತ್ರಕರ್ತೆಯ ಮೇಲಿನ ದೂರನ್ನು ವಾಪಸ್ ಪಡೆಯಬೇಕು ಹಾಗೂ ಆಧಾರ್‌ನಲ್ಲಿ ದಾಖಲಾಗಿರುವ ವಿಷಯಗಳು ಸೋರಿಕೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.

ಅಲ್ಪಸಂಖ್ಯಾತರ ಮತಗಳು ಡಿಲಿಟ್
ಕಳೆದ ಬಿಬಿಎಂಪಿ ಚುನಾವಣೆ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿರುವ ಅಲ್ಪಸಂಖ್ಯಾತರ ಹೆಸರುಗಳನ್ನು ಬಿಜೆಪಿ ಡಿಲಿಟ್ ಮಾಡಿಸಿತ್ತು. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದೆ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಹೆಸರುಗಳನ್ನು ರದ್ದು ಮಾಡುವ ಪ್ರಕ್ರಿಯೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಎಚ್ಚರಿಕೆ ವಹಿಸಬೇಕು. ಅಗತ್ಯವಿದ್ದರೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಬೇಕು.
-ಡಾ.ಜಿ.ಪರಮೇಶ್ವರ್ ಅಧ್ಯಕ್ಷ ಕೆಪಿಸಿಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News