×
Ad

ಕಾಂಗ್ರೆಸ್‌ನದ್ದು ಜಾತಿ, ಧರ್ಮಗಳನ್ನು ಸಮಾನವಾಗಿ ಕಾಣುವ ಹಿಂದುತ್ವ: ಡಾ.ಜಿ.ಪರಮೇಶ್ವರ್

Update: 2018-01-09 18:26 IST

ಬೆಂಗಳೂರು, ಜ.9: ಸ್ವಾಮಿ ವಿವೇಕಾನಂದರು ಬೋಧಿಸಿರುವ ಎಲ್ಲ ಜಾತಿ, ಧರ್ಮಗಳನ್ನು ಸಮಾನವಾಗಿ ಕಾಣುವ ಹಿಂದುತ್ವವನ್ನು ಕಾಂಗ್ರೆಸ್ ಪ್ರತಿಪಾದಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮೃದು ಹಿಂದುತ್ವವಾದವನ್ನು ಅನುಸರಿಸುತ್ತಿದೆ ಎಂಬ ಆರೋಪ ಕೇಳಿಬರುತ್ತಿವೆ. ಆದರೆ, ಕಾಂಗ್ರೆಸ್ ವಿವೇಕಾನಂದರು ಪ್ರತಿಪಾದಿಸಿರುವ ಒಳಗೊಳ್ಳುವಿಕೆಯ ಹಿಂದುತ್ವವನ್ನು ನೇರವಾಗಿ ಪ್ರತಿಪಾದಿಸುತ್ತಿದೆ ಎಂದು ಹೇಳಿದರು.

ಬಿಜೆಪಿ ರಾಹುಲ್ ಗಾಂಧಿ ದೇವಸ್ಥಾನಕ್ಕೆ ಹೋಗಿದ್ದನ್ನು ದೊಡ್ಡ ವಿವಾದ ಮಾಡುತ್ತಿದೆ. ಆ ಮೂಲಕ ಹಿಂದುತ್ವವನ್ನು ಗುತ್ತಿಗೆ ಪಡೆದವರಂತೆ ಬಿಜೆಪಿ ನಾಯಕರು ವರ್ತಿಸುತ್ತಿದ್ದಾರೆ. ಹಾಗೆ ನೋಡಿದರೆ, ಜವಹರಲಾಲ್ ನೆಹರೂ ಸಹಿತ ಎಲ್ಲ ಕಾಂಗ್ರೆಸ್ ನಾಯಕರು ದೇವಸ್ಥಾನಕ್ಕೆ ಹೋಗಿದ್ದಾರೆ. ಧರ್ಮ ಎಂಬುದು ಪ್ರತಿಯೊಬ್ಬರ ಖಾಸಗಿ ವಿಷಯವಾಗಿದೆ. ಆ ಕುರಿತು ಟೀಕೆ ಮಾಡುವುದು ಸರಿಯಲ್ಲವೆಂದು ಅವರು ಹೇಳಿದರು.

ಕೋಮುಗಲಭೆಯೇ ಬಿಜೆಪಿ ಅಸ್ತ್ರ: ಚುನಾವಣೆಗಳು ಸಮೀಪವಾದಂತೆ ಬಿಜೆಪಿ ಕೋಮು ಗಲಭೆಗಳನ್ನು ಮಾಡಲು ಹೊಂಚು ಹಾಕುತ್ತಿದೆ. ಬಿಜೆಪಿ ನಾಯಕರಿಗೆ ವೇದಿಕೆ ಸಿಕ್ಕ ಕೂಡಲೇ ಕೋಮು ಪ್ರಚೋಧನಾಕಾರಿ ಭಾಷಣಗಳನ್ನು ಮಾಡುವುದನ್ನೇ ತಮ್ಮ ಸಿದ್ಧಾಂತವಾಗಿಸಿಕೊಂಡಿದ್ದಾರೆ. ಈ ಬಗ್ಗೆ ಜನತೆ ಎಚ್ಚರಿಕೆಯಿಂದಿರಬೇಕು ಎಂದು ಅವರು ಹೇಳಿದರು.

ಯೋಗಿ ಟೀಕೆ ಅಸಂವಿಧಾನಿಕ: ನಮ್ಮ ರಾಜ್ಯಕ್ಕೆ ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಟೀಕಿಸುವ ಮೂಲಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅಸಂವಿಧಾನಿಕವಾಗಿ ವರ್ತಿಸಿದ್ದಾರೆ. ಆದಿತ್ಯನಾಥ ಬಿಜೆಪಿ ಸಿದ್ಧಾಂತದ ಕುರಿತು ಮಾತನಾಡಬಹುದಿತ್ತು. ಆದರೆ, ಉದ್ದೇಶಪೂರ್ವಕವಾಗಿಯೇ ಸಿದ್ದರಾಮಯ್ಯರವರ ಖಾಸಗಿ ವಿಷಯಗಳ ಕುರಿತು ಟೀಕೆ ಮಾಡಿದ್ದಾರೆ. ಬಿಜೆಪಿ ಎಂತಹ ಕೀಳುಮಟ್ಟದ ರಾಜಕಾರಣ ಮಾಡಬಲ್ಲದು ಎಂಬುದಕ್ಕೆ ಇಂತಹ ನೂರಾರು ಉದಾಹರಣೆಗಳನ್ನು ಕೊಡಬಹುದು ಎಂದು ಅವರು ತಿಳಿಸಿದರು.

ಮಂಗಳೂರಿನ ಕಾಟಿಪಳ್ಳದಲ್ಲಿ ಹತ್ಯೆಗೀಡಾದ ದೀಪಕ್‌ರಾವ್ ಹತ್ಯೆಯ ಹಿಂದೆ ಬಿಜೆಪಿ ಪಾಲಿಕೆ ಸದಸ್ಯನ ಕೈವಾಡವಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಆರೋಪಿಸಿದ್ದಾರೆ. ಅತ್ಯಂತ ಜವಾಬ್ದಾರಿ ಸ್ಥಾನದಲ್ಲಿರುವ ಕುಮಾರಸ್ವಾಮಿಯ ಈ ಹೇಳಿಕೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಆ ಮೂಲಕ ಹಿಂದುತ್ವ ಎಂದು ಹೇಳಿಕೊಳ್ಳುವ ಬಿಜೆಪಿಯ ನಿಜವಾದ ಬಣ್ಣ ಬಯಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News