×
Ad

ಕೋಮುವಾದಿಗಳಿಗೆ ಜನತೆ ತಕ್ಕ ಪಾಠ ಕಲಿಸಬೇಕಿದೆ: ಎಂ.ವೀರಪ್ಪಮೊಯ್ಲಿ

Update: 2018-01-09 18:29 IST

ಬೆಂಗಳೂರು, ಜ.9: ಕೋಮುಗಲಭೆಗಳಿಗೆ ಪ್ರಚೋದನೆ ನೀಡುವ ಕೋಮುವಾದಿಗಳಿಗೆ ಜನತೆ ತಕ್ಕ ಪಾಠ ಕಲಿಸಬೇಕಿದೆ ಎಂದು ಸಂಸದ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಮಂಗಳವಾರ ನಗರದ ಯಲಹಂಕ ಹಳೆ ನಗರದ ಚೌಡೇಶ್ವರಿ ವಾರ್ಡ್ ನಂ.2 ರಲ್ಲಿ ನೂತನವಾಗಿ ನಿರ್ಮಿಸಿರುವ ‘ಇಂದಿರಾ ಕ್ಯಾಂಟೀನ್’ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಚುನಾವಣೆ ಸಮೀಪಿಸುತ್ತಿದ್ದಂತೆ, ಬಿಜೆಪಿ ಜನರ ನೆಮ್ಮದಿ ಕದಡುವ ಕಾರ್ಯದಲ್ಲಿ ತೊಡಗಿ ಕೋಮುವಾದ ಎಬ್ಬಿಸುತ್ತಿದೆ. ಈ ಹಿಂದೆ 2013ರಲ್ಲೂ ಇದೇ ಮಾದರಿಯಲ್ಲಿ ಕರಾವಳಿಯಲ್ಲಿ ಕೋಮು ಗಲಭೆ ಸೃಷ್ಟಿಸಲು ಮುಂದಾಗಿತ್ತು. ಆದರೆ, ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿತು. ಇದೀಗ ಮತ್ತೆ ಆರಂಭಿಸಿರುವ ಬಿಜೆಪಿಗೆ 2018ರ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುವ ಮೂಲಕ ಅಮಾನುಷವಾಗಿ ಯುವಕರನ್ನು ಹತ್ಯೆ ಮಾಡುವ ಕೆಲಸಕ್ಕೆ ಬಿಜೆಪಿ ಕೋಮುವಾದಿಗಳು ಮುಂದಾಗಿರುವುದು ದುರಂತ ಎಂದ ವಿಷಾದಿಸಿದರು.

ಅನುಕೂಲ: ಬೇರೆ ಬೇರೆ ಕಡೆಯಿಂದ ವಲಸೆ ಬಂದು ಕೆಲಸ ಮಾಡುವ ಕಾರ್ಮಿಕರಿಗೆ, ಬಡವರಿಗೆ ಶುಚಿ ರುಚಿಯಿಂದ ಕೂಡಿದ ಆರೋಗ್ಯಕರವಾದ ಆಹಾರ ಇಂದಿರಾ ಕ್ಯಾಂಟೀನ್‌ನಿಂದ ಸಿಗುತ್ತದೆ. ಈಗಾಗಲೇ ವಾರ್ಡ್ ವ್ಯಾಪ್ತಿಗಳಲ್ಲಿ 165 ಇಂದಿರಾ ಕ್ಯಾಂಟೀನ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಕ್ಯಾಂಟೀನ್‌ಗೆ ಜಾಗದ ಅಭಾವ ಇರುವ ಕಡೆ ಮೊಬೈಲ್ ಕ್ಯಾಂಟೀನ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಾರ್ಡ್ ನಂ.2ರ ಬಿಬಿಎಂಪಿ ಸದಸ್ಯೆ ಪದ್ಮಾವತಿ, ಕಾಂಗ್ರೆಸ್ ಮುಖಂಡರಾದ ಎಂ.ಎನ್.ಗೋಪಾಲ ಕೃಷ್ಣ, ವಿಧಾನ ಪರಿಷತ್ ಸದಸ್ಯ ಎಂ. ನಾರಾಯಣ ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಬಿ. ಬಾಷಾ, ಜಿ.ಪಂ. ಸದಸ್ಯ ಚೊಕ್ಕನಹಳ್ಳಿ ವೆಂಕಟೇಶ್ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News