ಸದಾಶಿವ ವರದಿಗಾಗಿ ಜ.11ರಂದು ಬೃಹತ್ ಪ್ರತಿಭಟನೆ
ಬೆಂಗಳೂರು, ಜ.9: ನ್ಯಾ.ಸದಾಶಿವ ಆಯೋಗದ ವರದಿಯನ್ನು ಶಿಫಾರಸ್ಸು ಮಾಡಲು ಮೀನಾಮೇಷ ಎಣಿಸುತ್ತಿರುವ ರಾಜ್ಯ ಸರಕಾರದ ಕ್ರಮ ಖಂಡಿಸಿ ಜ.11ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಯಲಿದೆ ಎಂದು ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ ಜಾರಿ ಹೋರಾಟ ಸಮಿತಿ ಹೇಳಿದೆ.
ಈ ಬಗ್ಗೆ ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿ ಪ್ರಧಾನ ಕಾರ್ಯದರ್ಶಿ ಮಾರಸಂದ್ರ ಮುನಿಯಪ್ಪ ಮಾತನಾಡಿ, ಸದಾಶಿವ ಆಯೋಗದ ವರದಿಯನ್ನು ಸರಕಾರವು ಒಪ್ಪಿಕೊಳ್ಳುವಂತೆ ಕೋರಿ ರಾಜ್ಯದ ಎಲ್ಲ ಶಾಸಕರು, ಸಂಸದರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಬೇಕೆಂದು ಹೇಳಿದರು.
ಪರಿಶಿಷ್ಟ ಜಾತಿ ಮೀಸಲಾತಿ ಹಂಚಿಕೆ ಸಂಬಂಧ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನೇತೃತ್ವದ ಸರಕಾರ ನ್ಯಾ.ಎ.ಜೆ.ಸದಾಶಿವ ಆಯೋಗ ರಚನೆ ಮಾಡಿತ್ತು. ಈ ಆಯೋಗವು ಪರಿಶಿಷ್ಟ ಜಾತಿಯೊಳಗೆ ಇರುವಂತಹ 101 ಜಾತಿಗಳಿಗೆ ಶಿಕ್ಷಣ ಹಾಗೂ ಉದ್ಯೋಗಗಳಲ್ಲಿ ಲಭ್ಯವಾಗಿರುವ ಮೀಸಲಾತಿ ಪ್ರಮಾಣ, ಜನಸಂಖ್ಯೆ ಸೇರಿ ಇನ್ನಿತರೆ ಅಂಶಗಳನ್ನು ಒಳಗೊಂಡಂತೆ, ವರದಿಯನ್ನು 2012ರಲ್ಲಿ ಸರಕಾರಕ್ಕೆ ಸಲ್ಲಿಸಿತ್ತು. ಆದರೆ, ಇದುವರೆಗೂ ರಾಜ್ಯ ಸರಕಾರ ಈ ವರದಿಯನ್ನು ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಮುಂದಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸದಾಶಿವ ಆಯೋಗದ ವರದಿಯ ಬಗ್ಗೆ ಇರುವ ತಪ್ಪು ಗ್ರಹಿಕೆಗಳನ್ನು ಅನುಮಾನ, ಗೊಂದಲ ನಿವಾರಿಸಬೇಕು. 101 ಜಾತಿಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದರು.
ಸದಾಶಿವ ಆಯೋಗ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಕೆಲ ಸಂಘಟನೆ ಮುಖಂಡರೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಆದರೆ, ಸರಕಾರವೇ ಈ ವರದಿ ಶಿಫಾರಸ್ಸಿಗೆ ಹಿಂದೇಟು ಹಾಕುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದರು.
ಈ ವೇಳೆ ಸಮಿತಿ ಉಪಾಧ್ಯಕ್ಷರಾದ ಎಚ್.ಹನುಮಂತಪ್ಪ, ಸಿದ್ದರಾಜು, ಮಠಾಧೀಶ ಶ್ರೀ ಹರಳಯ್ಯ ಸ್ವಾಮಿ ಸೇರಿ ಪ್ರಮುಖರಿದ್ದರು.
ಜ.11ರಂದು ಪ್ರತಿಭಟನಾ ಮೆರವಣಿಗೆ
ಜ.11ರಂದು ನಗರದ ಪುರಭವನದಿಂದ ಮೈಸೂರು ಬ್ಯಾಂಕ್ ವೃತ್ತದ ಜಿಲ್ಲಾಧಿಕಾರಿಗಳ ಕಚೇರಿವರೆಗೂ ನೂರಾರು ದಲಿತ ಸಂಘಟನೆಗಳ ನೇತೃತ್ವದಲ್ಲಿ ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ ಜಾರಿಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ.ಸಂಚಾರ ದಟ್ಟಣೆ ಸಾಧ್ಯತೆ
ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹಿಸಿ ಜ.11ರಂದು ಬೆಳಗ್ಗೆ 11 ಗಂಟೆಗೆ ನಗರದ ಪುರಭವನದಿಂದ ಮೈಸೂರು ಬಾಂಕ್ ವೃತ್ತದ ಜಿಲ್ಲಾಧಿಕಾರಿಗಳ ವರೆಗೂ ನಡೆಯುವ ಪ್ರತಿಭಟನಾ ಮೆರವಣಿಗೆಯಲ್ಲಿ ಐದು ಸಾವಿರಕ್ಕೂ ಹೆಚ್ಚು ಹೋರಾಟಗಾರರು ಪಾಲ್ಗೊಳ್ಳಲಿದ್ದು, ಮೈಸೂರು ಬ್ಯಾಂಕ್ ವೃತ್ತ, ಕಾರ್ಪೋರೇಷನ್ ವೃತ್ತ ಸೇರಿದಂತೆ ವಿವಿಧ ಕಡೆ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ.