ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲು ಆಗ್ರಹ
ಬೆಂಗಳೂರು, ಜ.9: ಕೊಳಗೇರಿ ನಿವಾಸಿಗಳಿಗೆ ಸರಕಾರ ವಾಂಬೇ ಹಾಗೂ ಹುಡ್ಕೋ ಯೋಜನೆ ಅಡಿ ಮನೆ ನಿರ್ಮಿಸಿದ ಮನೆಯ ಸಾಲ ಮನ್ನಾ ಮಾಡಿದ್ದು, ಫಲಾನುಭವಿಗಳಿಗೆ ಕ್ರಯಪತ್ರ ಹಾಗೂ ಹಕ್ಕುಪತ್ರ ವಿತರಣೆ ಮಾಡುವಂತೆ ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಎಂ.ಗುರುಮೂರ್ತಿ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ಕೊಳಗೇರಿ ನಿವಾಸಿಗಳಿಗೆ ಮನೆ ನೀಡಿದೆ. ಅದಕ್ಕೆ ಸಂಬಂಧಪಟ್ಟ ಫಲಾನುಭವಿಗಳ ಸಾಲ ಮನ್ನಾ ಆಗಿ 4 ವರ್ಷ ಕಳೆದಿವೆ. ಆದರೆ, ಇದುವರೆಗೂ ಅವರಿಗೆ ಕ್ರಯಪತ್ರ ಹಾಗೂ ಹಕ್ಕುಪತ್ರ ವಿತರಣೆ ಮಾಡಿಲ್ಲ. ಆದ್ದರಿಂದ ಮಂಡಳಿ ಅಧ್ಯಕ್ಷರು ಇತ್ತ ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕ್ರಯಪತ್ರ ಹಾಗೂ ಹಕ್ಕುಪತ್ರ ವಿತರಣೆಗೆ ಕರ್ನಾಟಕ ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳನ್ನು ಭೇಟಿ ಮಾಡಿದರೆ ಕೇವಲ ಉಡಾಪೆಯ ಉತ್ತರ ನೀಡುತ್ತಾರೆ. ಅಧಿಕಾರಿಗಳು ಕರ್ತವ್ಯಲೋಪ ಎಸಗುತ್ತಿದ್ದು, ಸರಕಾರದ ಯೋಜನೆಗಳು ಜನರಿಗೆ ತಲುಪದಂತೆ ಮಾಡುತ್ತಿದ್ದಾರೆ. ಮೌಖಿಕ ಆದೇಶ ನೀಡಿ ಯೋಜನೆಗಳು ಬಡವರಿಗೆ ಸಿಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳ ಇಂತಹ ಜನವಿರೋಧಿ ನೀತಿಯನ್ನು ಗಮನಿಸಬೇಕು. ವಾಂಬೇ ಹಾಗೂ ಹುಡ್ಕೋ ಲಾನುಭವಿಗಳಿಗೆ ಕೂಡಲೇ ಕ್ರಯಪತ್ರ ಹಾಗೂ ಹಕ್ಕುಪತ್ರ ವಿತರಣೆಗೆ ಮುಖ್ಯಮಂತ್ರಿಗಳು ಆದೇಶಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಎಲ್.ಲೋಕೇಶ್, ಮುನಿಯಪ್ಪ, ಪಿ.ಪೂಜಪ್ಪ, ಎನ್.ನಾಗರಾಜು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.