×
Ad

ನಕಲಿ ದಾಖಲೆ ಸೃಷ್ಟಿಸಿ ಹಣ ಲೂಟಿ: ಆರೋಪ

Update: 2018-01-09 20:27 IST

ಬೆಂಗಳೂರು, ಜ.9: ಬಿಬಿಎಂಪಿಯಲ್ಲಿ ಪೌರಕಾರ್ಮಿಕರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ. ವಾರ್ಡ್‌ಗಳಲ್ಲಿ ಬಯೋಮೆಟ್ರಿಕ್ ಯಂತ್ರ ಅಳವಡಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನವ ಭಾರತ ಪ್ರಜಾಸತ್ತಾತ್ಮಕ ಪಕ್ಷದ ರಾಷ್ಟ್ರಾಧ್ಯಕ್ಷ ಅನಿಲ್ ಶೆಟ್ಟಿ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ 198 ವಾರ್ಡ್‌ಗಳಲ್ಲೂ ಬಿಬಿಎಂಪಿ ಪೌರಕಾರ್ಮಿಕರ ಕೊರತೆ ಇದ್ದು, ಅವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅಧಿಕಾರಿಗಳು ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಈ ಸಂಬಂಧ ವಾರ್ಡ್‌ಗಳಲ್ಲಿ ಬಯೋ ವೆುಟ್ರಿಕ್ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅಕ್ರಮ ನಡೆಸಿರುವುದು ಬಯಲಾಗಿದೆ ಎಂದು ಹೇಳಿದರು.

ಬಯೋಮೆಟ್ರಿಕ್ ಯಂತ್ರ ಕೆಲಸ ಮಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಲು ಹೋದಾಗ ಅಲ್ಲಿಯೂ ಪೌರಕಾರ್ಮಿಕರ ನಕಲಿ ಹೆಸರುಗಳನ್ನು ಬೋಗಸ್ ಮಾಡಿರುವುದು ಬೆಳಕಿಗೆ ಬಂದಿದೆ. ನಗರದ ವಿವಿಧ 14 ವಾರ್ಡ್‌ಗಳಲ್ಲಿ ತಪಾಸಣೆ ನಡೆಸಿದ್ದು, 60ಕ್ಕೂ ಹೆಚ್ಚು ಪೌರಕಾರ್ಮಿಕರ ಹೆಸರು ನಕಲಿ ಮಾಡಿರುವುದು ಬೆಳಕಿಗೆ ಬಂದಿದೆ. ಇದರಿಂದ ನಿಜವಾದ ಪೌರಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ ಎಂದ ಅವರು, ಕೂಡಲೇ ಮೇಯರ್ ಈ ಕುರಿತು ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳಬೇಕು ಎಂದರು.

ಪ್ರಾಮಾಣಿಕವಾಗಿ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಮೂರು-ನಾಲ್ಕು ತಿಂಗಳಿಗೊಂದು ಬಾರಿ ವೇತನ ನೀಡುತ್ತಾರೆ. ಆದರೆ, ನಕಲಿ ದಾಖಲೆಗಳನ್ನು ಸೃಷ್ಟಿಸುವ ಅಧಿಕಾರಿಗಳು ವಾರ್ಷಿಕವಾಗಿ 120 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಹೀಗಾಗಿ, ನಕಲಿ ಹೆಸರುಗಳನ್ನು ಪತ್ತೆ ಮಾಡಬೇಕು ಮತ್ತು ನಕಲಿ ಹೆಸರುಗಳನ್ನು ಸೇರ್ಪಡೆ ಮಾಡಿ ಅಕ್ರಮ ನಡೆಸುತ್ತಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಪೌರ ಕಾರ್ಮಿಕರ ಹಾಜರಾತಿ ಮಾಹಿತಿ ಸಂಗ್ರಹಿಸುವ ಸಲುವಾಗಿ ಬಯೋಮೆಟ್ರಿಕ್ ಪರಿಶೀಲನೆ ನಡೆಸಲು ತೆರಳಿದ್ದ ಸಂದರ್ಭದಲ್ಲಿ ನಕಲಿ ಹೆಸರುಗಳಿರುವುದು ಕಂಡು ಬಂದಿದೆ. ಈ ಸಂಬಂಧ ದಾಖಲೆಗಳ ಸಮೇತ ಪತ್ತೆಯಾದ ನಕಲಿ ಹೆಸರು ಹಾಗೂ ಅವುಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ, ಆರೋಗ್ಯ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ವಂಚನೆ ಬಗ್ಗೆ ದೂರು ದಾಖಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು. ಅಲ್ಲಿ ದೂರು ದಾಖಲಿಸಿಕೊಳ್ಳಲು ನಿರಾಕರಿಸಲಾಗಿದೆ. ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಅಭಿಯಂತರರು ಬಯೋಮೆಟ್ರಿಕ್ ಯಂತ್ರಗಳನ್ನು ಟ್ಯಾಂಪರಿಂಗ್ ಮಾಡಿರುವುದು ಸಹ ಬೆಳಕಿಗೆ ಬಂದಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಅವರು ಬೇಜವಾಬ್ದಾರಿತನ ಮೆರೆಯುತ್ತಿದ್ದಾರೆ. ಕ್ರಮಕ್ಕೆ ಹಿಂದೇಟು ಹಾಕುತ್ತಿದ್ದು, ನಮ್ಮ ಮೇಲೆ ಗೂಂಡಾಗಿರಿ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೀಗಾಗಿ, ಬಿಎಂಟಿಎ ಹಿರಿಯ ಅಧಿಕಾರಿಗಳು ಹಾಗೂ ಆಯುಕ್ತರು ಈ ಸಂಬಂಧ ಕುರಿತು ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು. ವಂಚಕರ ವಿರುದ್ಧ ತನಿಖೆ ನಡೆಸಬೇಕು. ಸಾರ್ವಜನಿಕ ಲೆಕ್ಕ ಪರಿಶೋಧನೆಗೆ ಚಾಲನೆ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News