ರಾಜ್ಯ ವಿಧಾನಸಭೆ ಚುನಾವಣೆ: ಪಕ್ಷಗಳ ಮುಖಂಡರು-ಅಧಿಕಾರಿಗಳೊಂದಿಗೆ ಆಯೋಗದ ಸಮಾಲೋಚನೆ
ಬೆಂಗಳೂರು, ಜ.9: ರಾಜ್ಯ ವಿಧಾನಸಭೆಗೆ ಎಪ್ರಿಲ್ ಅಥವಾ ಮೇನಲ್ಲಿ ನಡೆಯಲಿರುವ ಚುನಾವಣೆಗೆ ಸಿದ್ಧತೆಗಳನ್ನು ಆರಂಭಿಸಲು ಕೇಂದ್ರ ಚುನಾವಣಾ ಆಯೋಗದ ಹಿರಿಯ ಉಪ ಆಯುಕ್ತ ಉಮೇಶ್ ಸಿನ್ಹಾ ನೇತೃತ್ವದ ತಂಡ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿತು.
ಮಂಗಳವಾರ ವಿಕಾಸಸೌಧದಲ್ಲಿ ಚುನಾವಣಾ ಆಯೋಗ ನಡೆಸಿದ ಸಭೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಸಿಪಿಎಂ, ಸಿಪಿಐ ಸೇರಿದಂತೆ ಇನ್ನಿತರ ಪಕ್ಷಗಳ ಮುಖಂಡರು ಪ್ರತ್ಯೇಕವಾಗಿ ತಮ್ಮ ಸಲಹೆಗಳು, ಆಕ್ಷೇಪಗಳನ್ನು ಸಲ್ಲಿಸಿದರು.
ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗಿನ ಸಭೆಯ ಬಳಿಕ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳೊಂದಿಗೆ ಚುನಾವಣೆಯ ಸಿದ್ಧತೆಗಳು, ಭದ್ರತಾ ಕ್ರಮಗಳು, ಮತದಾರರ ಪಟ್ಟಿ ಪರಿಷ್ಕರಣೆ, ಮತಗಟ್ಟೆಗಳು, ಚುನಾವಣೆಗೆ ಅಗತ್ಯವಿರುವ ಸಿಬ್ಬಂದಿಗಳು ಕುರಿತು ಚರ್ಚೆ ನಡೆಸಲಾಯಿತು.
ಆನಂತರ, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜತೆಯೂ ಚುನಾವಣೆ ವಿಚಾರವಾಗಿ ಮಾತುಕತೆ ನಡೆಸಲಾಯಿತು. ಎರಡು ದಿನಗಳ ಕಾಲ ಚುನಾವಣಾ ಆಯೋಗದ ಅಧಿಕಾರಿಗಳು ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಸರಣಿ ಸಭೆಗಳನ್ನು ನಡೆಸಲಿದ್ದಾರೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್, ವಿಧಾನಸಭೆ ಚುನಾವಣೆಯ ಸಿದ್ಧತೆ ಕುರಿತು ಮಾಡಿಕೊಂಡಿರುವ ಸಿದ್ಧತೆಗಳ ಕುರಿತು ಮಾಹಿತಿಯನ್ನು ಆಯೋಗಕ್ಕೆ ಒದಗಿಸಿದ್ದಾರೆ. ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸುವುದಕ್ಕೆ ಸಂಬಂಧಿಸಿದಂತೆ ಎಸೆಸೆಲ್ಸಿ, ಪಿಯುಸಿ ಪರೀಕ್ಷೆ ಸೇರಿದಂತೆ ಪ್ರಮುಖ ಹಬ್ಬಗಳ ಮಾಹಿತಿಯನ್ನು ಆಯೋಗವು ಪಡೆದುಕೊಂಡಿದೆ.
ಚುನಾವಣಾ ಆಯೋಗದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ ವಿವೇಕ್ ರೆಡ್ಡಿ, ಮತದಾರರ ನೋಂದಣಿ ಪ್ರಕ್ರಿಯೆ ಸಮರ್ಪವಾಗಿ ನಡೆದಿಲ್ಲ. ಮತದಾರರ ಪಟ್ಟಿ ಪರಿಷ್ಕರಣೆಯಾಗಬೇಕಿದೆ. ಈ ವಿಚಾರವನ್ನು ಚುನಾವಣಾ ಆಯೋಗದ ಗಮನಕ್ಕೆ ತರಲಾಗಿದೆ. ನ್ಯಾಯ ಸಮ್ಮತ, ಪಾರದರ್ಶಕವಾಗಿ ಚುನಾವಣೆ ನಡೆಯಬೇಕೆಂಬುದು ನಮ್ಮ ಬಯಕೆಯಾಗಿದೆ ಎಂದರು.
ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳ ದುರುಪಯೋಗದ ಬಗ್ಗೆ ನಮ್ಮಲ್ಲಿದ್ದ ಆತಂಕವನ್ನು ಚುನಾವಣಾ ಆಯೋಗದ ಗಮನ ಸೆಳೆಯಲಾಯಿತು. ಈ ಬಗ್ಗೆ ಯಾವುದೆ ಆತಂಕ ಪಡುವ ಅಗತ್ಯವಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರನ್ನು ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳುವುದು ಬೇಡ, ಚುನಾವಣೆಯಲ್ಲಿ ನಡೆಯುವ ಅಕ್ರಮಗಳ ಬಗ್ಗೆ ಸೂಕ್ತ ಗಮನ ಕೇಂದ್ರೀಕರಿಸುವಂತೆ ಮನವಿ ಮಾಡಲಾಗಿದೆ ಎಂದು ಸಿಪಿಎಂ ನಾಯಕ ಮಾರುತಿ ಮಾನ್ಪಡೆ ತಿಳಿಸಿದರು.