×
Ad

ದೀಪಕ್ ಹತ್ಯೆ ಪ್ರಕರಣದ ಸತ್ಯಾಂಶ ಹೊರಹಾಕದ ಸರಕಾರ: ಎಚ್.ಡಿ.ಕುಮಾರಸ್ವಾಮಿ

Update: 2018-01-09 20:54 IST

ಬೆಂಗಳೂರು, ಜ.9: ಮಂಗಳೂರಿನ ಸುರತ್ಕಲ್ ಬಳಿ ದುಷ್ಕರ್ಮಿಗಳ ದಾಳಿಯಿಂದ ಹತ್ಯೆಗೀಡಾದ ದೀಪಕ್‌ರಾವ್ ಪ್ರಕರಣದ ಸತ್ಯಾಂಶವನ್ನು ರಾಜ್ಯ ಸರಕಾರ ಹೊರ ಹಾಕುತ್ತಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ಮಂಗಳವಾರ ಜೆ.ಪಿ.ನಗರದಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರು ಗಲಭೆ, ದೀಪಕ್‌ರಾವ್ ಕೊಲೆ ಪ್ರಕರಣದಲ್ಲಿ ನಾನು ಯೂಟರ್ನ್ ಮಾಡುತ್ತಿಲ್ಲ. ಪ್ರಕರಣದ ಬಂಧಿತ ಆರೋಪಿಗಳಿಂದ ಸಂಗ್ರಹಿಸಿರುವ ಮಾಹಿತಿಯನ್ನು ಸರಕಾರವೇಕೆ ಹಿಂದೇಟು ಹಾಕುತ್ತಿದೆ ಎಂದು ಪ್ರಶ್ನಿಸಿದರು.

ದೀಪಕ್‌ರಾವ್ ಕೊಲೆ ಪ್ರಕರಣದಲ್ಲಿ ಬಿಜೆಪಿಯ ಕಾರ್ಪೊರೇಟರ್ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದೇನೆಯೆ ಹೊರತು, ಯಾರ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ, ಸ್ವತಃ ಆ ಕಾರ್ಪೊರೇಟರ್ ಅವರೆ ಮಾಧ್ಯಮಗಳ ಮುಂದೆ ಹೇಳಿಕೆಗಳನ್ನು ನೀಡುತ್ತಿರುವುದೇಕೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೂ ಮಂಗಳೂರಿನಲ್ಲಿ ಶಾಂತಿ ನೆಲೆಸಬೇಕೆಂಬ ಕಾಳಜಿಯಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಬೇಕಾಗಿರುವುದು ಕೇವಲ ರಾಜಕೀಯ ಮಾತ್ರ ಎಂದು ಅವರು ಹೇಳಿದರು.

ಯಾವ ಪ್ರಕರಣದಲ್ಲಿಯೂ ನಾನು ಹಿಟ್ ಅಂಡ್ ರನ್ ಮಾಡಿಲ್ಲ. ಸರಕಾರದ ಹಗರಣಗಳನ್ನು ಬಯಲಿಗೆಳೆಯುವುದಾಗಿ ಹೇಳಿಕೆಗಳನ್ನು ನೀಡಿ ಅದನ್ನು ಮಾಡಲು ಸಾಧ್ಯವಾಗದೆ ಹಿಟ್ ಅಂಡ್ ರನ್ ಮಾಡುತ್ತಿರುವುದು ಬಿಜೆಪಿಯವರು ಎಂದು ಕುಮಾರಸ್ವಾಮಿ ಟೀಕಿಸಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಕಿಂಗ್ ಮೇಕರ್ ಆಗುವುದಿಲ್ಲ. ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ಮೂಲಕ ಕಿಂಗ್ ಆಗಲಿದೆ. ರಾಜ್ಯದ ರೈತಾಪಿ ವರ್ಗ ನಮ್ಮ ಪಕ್ಷದ ಪರವಾಗಿದ್ದು, ಅಧಿಕಾರದ ಗದ್ದುಗೆ ಹಿಡಿಯುವುದು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News