ಗಲ್ಲು ಶಿಕ್ಷೆ ರದ್ದು ಕೋರಿ ಅಪರಾಧಿ ಉಮೇಶ್ ರೆಡ್ಡಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ
ಬೆಂಗಳೂರು, ಜ.10: ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ತನಗೆ ವಿಧಿಸಿರುವ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸುವಂತೆ ಕೋರಿ ಅಪರಾಧಿ ಉಮೇಶ್ ರೆಡ್ಡಿ ಸಲ್ಲಿಸಿರುವ ಮೇಲ್ಮನವಿಯನ್ನು ಹೈಕೋರ್ಟ್ ವಿಚಾರಣೆಗೆ ಅಂಗೀಕರಿಸಿದೆ.
ಉಮೇಶ್ ರೆಡ್ಡಿ ಸಲ್ಲಿಸಿರುವ ಅರ್ಜಿಯನ್ನು ಕೆಲ ಹೊತ್ತು ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ. ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಪೀಠ, ಅಂತಿಮ ವಿಚಾರಣೆಯನ್ನು ಫೆ.20ಕ್ಕೆ ಮುಂದೂಡಿತು. ಇದೇ ವೇಳೆ ಪ್ರಕರಣದ ಸಂಬಂಧ ಯಾವುದಾದರೂ ದಾಖಲೆಗಳನ್ನು ಸಲ್ಲಿಸುವುದಿದ್ದರೆ ಅವುಗಳನ್ನು ಮುಂದಿನ ವಿಚಾರಣೆಯೊಳಗೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಪ್ರತಿವಾದಿಗಳಾದ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನಿರ್ದೇಶಿಸಿತು.
ವಿಚಾರಣೆ ವೇಳೆ ವಾದಿಸಿದ ಅರ್ಜಿದಾರರ ಪರ ವಕೀಲರು, ಗಲ್ಲುಶಿಕ್ಷೆ ರದ್ದು ಕೋರಿ ಉಮೇಶ್ ರೆಡ್ಡಿ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗಳು ನಿಯಮದ ಪ್ರಕಾರ 90 ದಿನಗಳಲ್ಲಿ ಇತ್ಯರ್ಥಪಡಿಸಬೇಕು. ಆದರೆ ಅದಕ್ಕಾಗಿ 830 ದಿನಗಳನ್ನು ತೆಗೆದುಕೊಂಡಿದ್ದು, ಅರ್ಜಿ ವಿಲೇವಾರಿ ವಿಳಂಬ ಮಾಡಿದ್ದಾರೆ. ಸತತ 18 ವರ್ಷಗಳಿಂದ ಜೈಲಿನಲ್ಲಿರುವ ಅರ್ಜಿದಾರ ಮಾನಸಿಕ ಕ್ಷೋಭೆಗೆ ಗುರಿಯಾಗಿದ್ದು, ವೈದ್ಯರು ಹಾಗೂ ಜೈಲು ಅಧಿಕಾರಿಗಳೂ ಅದನ್ನು ದೃಢೀಕರಿಸಿದ್ದಾರೆ ಎಂದರು.
ಕೇಂದ್ರ ಸರಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ನಾವಡಗಿ ವಾದಿಸಿ, ನಿಯಮದ ಪ್ರಕಾರವೇ ರಾಷ್ಟ್ರಪತಿಗಳು ಕ್ಷಮಾದಾನದ ಅರ್ಜಿ ಇತ್ಯರ್ಥಪಡಿಸಿದ್ದು, ಅರ್ಜಿ ತಿರಸ್ಕಾರಕ್ಕೆ ಕಾರಣಗಳನ್ನೂ ನೀಡಿದ್ದಾರೆ. ಆ ಕುರಿತ ಎಲ್ಲ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಬಹುದೋ, ಇಲ್ಲವೋ ಎಂಬುದರ ಕುರಿತು ಮಾಹಿತಿ ಪಡೆದು ನ್ಯಾಯಾಲಯಕ್ಕೆ ವಿವರ ನೀಡಲಾಗುವುದು ಎಂದು ತಿಳಿಸಿದರು.
ಮೇಲ್ಮನವಿಯನ್ನು ವಿಚಾರಣೆಗೆ ಅಂಗೀಕರಿಸಿದ ನ್ಯಾಯಾಲಯ, ವಿಚಾರಣೆಯನ್ನು ಫೆ.20ಕ್ಕೆ ಮುಂದೂಡಿತು.