ಮಿಂಚಿದ ಶೋರೆ, ದಿಲ್ಲಿಗೆ ಸುಲಭ ಜಯ

Update: 2018-01-10 18:41 GMT

ಹೊಸದಿಲ್ಲಿ, ಜ.10: ರಣಜಿ ಟ್ರೋಫಿ ಫೈನಲ್‌ನಲ್ಲಿ ಮಿಂಚಿದ್ದ ಧುೃವ್ ಶೋರೆ ಅರ್ಧಶತಕದ(ಔಟಾಗದೆ 59,44 ಎಸೆತ)ನೆರವಿನಿಂದ ದಿಲ್ಲಿ ತಂಡ ಹರ್ಯಾಣ ವಿರುದ್ಧದ ಸೈಯದ್ ಮುಶ್ತಾಕ್ ಅಲಿ ಟ್ವೆಂಟಿ-20 ಟ್ರೋಫಿ ಟೂರ್ನಿಯಲ್ಲಿ ಏಳು ವಿಕೆಟ್‌ಗಳ ಸುಲಭ ಜಯ ದಾಖಲಿಸಿದೆ.

ಬುಧವಾರ ಇಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 154 ರನ್ ಗುರಿ ಪಡೆದಿದ್ದ ದಿಲ್ಲಿ ಮೂರು ಓವರ್‌ಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿದೆ. ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯವನ್ನು 2 ರನ್‌ಗಳಿಂದ ಸೋತಿದ್ದ ದಿಲ್ಲಿ ಈ ಗೆಲುವಿನ ಮೂಲಕ ನಾಕೌಟ್ ಹಂತದಲ್ಲಿ ಸ್ಪರ್ಧೆಯಲ್ಲಿ ಉಳಿದಿದೆ.

 ನಿತೀಶ್ ರಾಣಾ(39,26 ಎಸೆತ) ಅವರೊಂದಿಗೆ 80 ರನ್ ಸೇರಿಸಿದ ಶೋರೆ ಯಾವ ಹಂತದಲ್ಲೂ ಹರ್ಯಾಣದಿಂದ ಒತ್ತಡಕ್ಕೆ ಒಳಗಾಗಿಲ್ಲ. ಹಿರಿಯ ಬೌಲರ್ ಅಮಿತ್ ಮಿಶ್ರಾ 3 ಓವರ್‌ಗಳಲ್ಲಿ 32 ರನ್ ನೀಡಿ ದುಬಾರಿಯಾದರು.

ರಣಜಿಯಲ್ಲಿ ರಕ್ಷಣಾತ್ಮಕ ಆಟಕ್ಕೆ ಹೆಸರುವಾಸಿಯಾಗಿರುವ ಶೋರೆ ನಾಲ್ಕು ಸಿಕ್ಸರ್‌ಗಳನ್ನು ಸಿಡಿಸಿ ಗಮನ ಸೆಳೆದರು. ಗೌತಮ್ ಗಂಭೀರ್(19) ಹಾಗೂ ರಿಷಬ್ ಪಂತ್(9) ಔಟಾದಾಗ ತಂಡಕ್ಕೆ ಆಸರೆಯಾದರು. ಮೊದಲು ಬ್ಯಾಟಿಂಗ್ ಮಾಡಿದ್ದ ಹರ್ಯಾಣ ಚೈತನ್ಯ ಬಿಶ್ನೊಯ್(65)ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 153 ರನ್ ಕಲೆ ಹಾಕಿದೆ.

ಪಂಜಾಬ್‌ಗೆ ಸತತ ಜಯ: ಇದೇ ವೇಳೆ ಸರ್ವಿಸಸ್ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿದ ಪಂಜಾಬ್ ಸತತ 2ನೇ ಜಯ ದಾಖಲಿಸಿದೆ.

 ಮೊದಲು ಬ್ಯಾಟಿಂಗ್ ಮಾಡಿದ್ದ ಸರ್ವಿಸಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ ಕೇವಲ 140 ರನ್ ಗಳಿಸಿತು. ಮನ್‌ಪ್ರೀತ್ ಗೋನಿ 18 ರನ್‌ಗೆ 4 ವಿಕೆಟ್ ಕಬಳಿಸಿದರು. ಇದಕ್ಕೆ ಉತ್ತರವಾಗಿ ಪಂಜಾಬ್ ತಂಡ ಮನ್‌ದೀಪ್ ಸಿಂಗ್(84 ರನ್, 56 ಎಸೆತ) ಹಾಗೂ ಯುವರಾಜ್ ಸಿಂಗ್(ಔಟಾಗದೆ 35) ಸಾಹಸದ ನೆರವಿನಿಂದ 18ನೇ ಓವರ್‌ನಲ್ಲಿ ಗೆಲುವಿನ ಗುರಿ ತಲುಪಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News