ಭಾರತದಲ್ಲಿ ಮೋಸ ಹೋದ ಘಾನಾದ ಇಬ್ಬರು ಫುಟ್ಬಾಲ್ ಆಟಗಾರರಿಗೆ ಬಂಧನ ಭೀತಿ

Update: 2018-01-10 18:51 GMT

ಕೋಲ್ಕತಾ, ಜ.10: ಕೋಲ್ಕತಾದ ಪ್ರಖ್ಯಾತ ಫುಟ್ಬಾಲ್ ಕ್ಲಬ್‌ವೊಂದರಲ್ಲಿ ಆಡುವ ಕನಸಿನೊಂದಿಗೆ ಭಾರತಕ್ಕೆ ಬಂದಿದ್ದ ಘಾನಾದ ಇಬ್ಬರು ಫುಟ್ಬಾಲ್ ಆಟಗಾರರಿಗೆ ಇಲ್ಲಿಗೆ ಬಂದ ಬಳಿಕವೇ ತಾವು ಮೋಸ ಹೋಗಿರುವ ವಿಚಾರ ಗೊತ್ತಾಗಿದೆ. ಕಳೆದ 2 ತಿಂಗಳಿಂದ ಕೋಲ್ಕತಾದ ಬೀದಿಗಳಲ್ಲಿ ಅಲೆದಾಡುತ್ತಿರುವ ಈ ಇಬ್ಬರು ಘಾನಾ ಪ್ರಜೆಗಳು ಬಂಧನದ ಭೀತಿ ಎದುರಿಸುತ್ತಿದ್ದಾರೆ.

ರಿಚರ್ಡ್ ಅಕುಮಿಹಾ ಹಾಗೂ ಟೆಟಿ ಫಿಲಿಪ್ ಅಡ್ಝಾ ಅವರು ಸುಬ್ರತಾ ಹೆಸರಿನ ಸ್ಥಳೀಯ ಏಜೆಂಟ್ ಸಲಹೆ ಹಾಗೂ ಮಾತು ನಂಬಿ, ಆತನಿಗೆ 500 ಅಮೆರಿಕನ್ ಡಾಲರ್ ನೀಡಿ ನವೆಂಬರ್‌ನಲ್ಲಿ ಕೋಲ್ಕತಾಕ್ಕೆ ಬಂದಿದ್ದರು. ಕೋಲ್ಕತಾಕ್ಕೆ ಬಂದ ಬಳಿಕ ಸತ್ಯಾಂಶ ಗೊತ್ತಾಗಿದೆ.

  ಈ ಇಬ್ಬರ ಬಳಿ ತಮ್ಮ ದೇಶಕ್ಕೆ ವಾಪಸಾಗಲು ಹಣವಿಲ್ಲ. ಇಬ್ಬರಿಗೆ ಕೋಲ್ಕತ್ತಾದ ಯಾವ ಕ್ಲಬ್‌ಗಳು ಟ್ರಯಲ್‌ಗೆ ಅವಕಾಶ ನೀಡಿಲ್ಲ. ಎರಡು ತಿಂಗಳ ಹಿಂದೆ ಭಾರತಕ್ಕೆ ಆಗಮಿಸಿರುವ ಘಾನಾ ಪ್ರಜೆಗಳ ವೀಸಾ ಅವಧಿ ಇನ್ನೊಂದು ವಾರದಲ್ಲಿ ಮುಗಿಯಲಿದೆ. ಅಕುಮಿಹಾ ಹಾಗೂ ಅಡ್ಝಾ ತಮ್ಮ ದೇಶಕ್ಕೆ ತಕ್ಷಣವೇ ವಾಪಸಾಗಬೇಕು ಇಲ್ಲವೇ ಬಂಧನಕ್ಕೊಳಗಾಗಬೇಕಾಗುತ್ತದೆ.

 ಕೋಲ್ಕತಾದ ಯಾವುದಾದರೂ ಒಂದು ಫುಟ್ಬಾಲ್ ಕ್ಲಬ್‌ನಲ್ಲಿ ಆಡಬೇಕೆಂಬ ಕನಸು ಹೊತ್ತು ಬಂದಿರುವ ಘಾನಾ ಆಟಗಾರರು ತಮ್ಮ ದೇಶದಿಂದ ನೆರವಿನ ನಿರೀಕ್ಷೆಯಲ್ಲಿದ್ದಾರೆ. ‘‘ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ದಯವಿಟ್ಟು ಒಂದು ಅವಕಾಶ ಕೊಡಿ. ನಾವು ನಿಮಗೆ ನಿರಾಸೆಗೊಳಿಸಲಾರೆವು’’ ಎಂದು ಈ ಇಬ್ಬರು ಆಟಗಾರರು ಅಂಗಲಾಚುತ್ತಿದ್ದಾರೆ. ಇವರ ಕೋರಿಕೆ ಕೋಲ್ಕತಾ ಫುಟ್ಬಾಲ್ ಕ್ಲಬ್‌ಗಳ ಕಿವಿಗೆ ಕೇಳಿಸುವುದೇ? ಎಂದು ಕಾದುನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News