ನ್ಯಾ. ಲೋಯಾ ಸಾವು ‘ಗಂಭೀರ ಪ್ರಕರಣ’ : ಸುಪ್ರೀಂ ಕೋರ್ಟ್

Update: 2018-01-12 08:48 GMT

ಹೊಸದಿಲ್ಲಿ, ಜ.12: ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣದ ನ್ಯಾಯಾಧೀಶರಾಗಿದ್ದ ಬಿ.ಎಚ್.ಲೋಯಾರ ಸಾವು ‘ಗಂಭೀರ ಪ್ರಕರಣ’ ಎಂದಿರುವ ಸುಪ್ರೀಂ ಕೋರ್ಟ್ ಈ ಬಗ್ಗೆ ಸ್ವತಂತ್ರ ತನಿಖೆಯ ಕುರಿತು ಮಹಾರಾಷ್ಟ್ರ ಸರಕಾರದಿಂದ ಪ್ರತಿಕ್ರಿಯೆ ಕೇಳಿದೆ. ಈ ಪ್ರಕರಣಕ್ಕೆ ಏಕಪಕ್ಷೀಯ ವಿಚಾರಣೆಗಿಂತ ದ್ವಿಪಕ್ಷೀಯ ವಿಚಾರಣೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಜಸ್ಟಿಸ್ ಅರುಣ್ ಮಿಶ್ರಾ ಹಾಗು ಎಂ.ಎಂ.ಶಾಂತನಗೌಡರ್ ಅವರ ನ್ಯಾಯಪೀಠವು ಮಹಾರಾಷ್ಟ್ರ ಸರಕಾರವು ಜನವರಿ 15ರೊಳಗೆ ಈ ಬಗ್ಗೆ ಪ್ರತಿಕ್ರಿಯೆ ಕೇಳಿದೆ.

“ಈ ಪ್ರಕರಣದ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ನಡೆಸುತ್ತಿದೆ. ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಬಾರದು” ಎಂದು ಹಿರಿಯ ಅಡ್ವಕೇಟ್ ದುಷ್ಯಂತ್ ದಾವೆ ಹೇಳಿದ್ದಾರೆ.

ಮಹಾರಾಷ್ಟ್ರ ಮೂಲದ ಪತ್ರಕರ್ತ, ಅರ್ಜಿದಾರ ಬಿ.ಆರ್.ಲೋನ್ ಪರ ವಕೀಲೆ ಇಂದಿರಾ ಜೈಸಿಂಗ್, ಈ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಬಾರದೆಂದು ತನಗೂ ಕೂಡ  ಬಾಂಬೆ ವಕೀಲರ ಅಸೋಸಿಯೇಷನ್ ನಿಂದ ಸೂಚಿಸಲಾಗಿದೆ ಎಂದಿದ್ದಾರೆ. 

ಅಮಿತ್ ಶಾ ಪ್ರಧಾನ ಆರೋಪಿಯಾಗಿದ್ದ ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣದ ನ್ಯಾಯಾಧೀಶ ಬಿ.ಎಚ್. ಲೋಯಾ ಅವರು ತನ್ನ ಸ್ನೇಹಿತನ ಪುತ್ರಿಯ ಮದುವೆ ಸಮಾರಂಭಕ್ಕೆ ಹೋಗಿದ್ದ ವೇಳೆ ನಿಗೂಢವಾಗಿ ಮೃತಪಟ್ಟಿದ್ದರು. ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇತ್ತೀಚೆಗೆ ಲೋಯಾ ಅವರ ಸಾವಿನ ಬಗ್ಗೆ ಅವರ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ ಹಾಗು ಲೋಯಾ ಸಾವಿನಲ್ಲಿ ನಿಗೂಢತೆ ಇದೆ ಎಂದು ಕಾರವಾನ್ ಮ್ಯಾಗಝಿನ್ ವರದಿ ಪ್ರಕಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News