ಮಕ್ಕಳಿಗೆ ಶಾಲೆಗೆ ಹೋಗಲು ಅನುಕೂಲವಾಗಲೆಂದು 2 ವರ್ಷಗಳಿಂದ ಗುಡ್ಡ ಅಗೆದು ರಸ್ತೆ ನಿರ್ಮಿಸಿದ ಅಪ್ಪ!

Update: 2018-01-12 11:04 GMT
ಸಾಂದರ್ಭಿಕ ಚಿತ್ರ

ಫುಲ್ಬನಿ,ಜ.12 :  ತನ್ನ ಮೂವರು ಮಕ್ಕಳು ಶಾಲೆಗೆ ಹೋಗಲು ಅನುಕೂಲಕರವಾಗಲೆಂದು ಗುಡ್ಡ ಅಗೆದು 15 ಕಿಮೀ ರಸ್ತೆಯನ್ನು ನಿರ್ಮಿಸುವ ಕಾಯಕಕ್ಕೆ ಎರಡು ವರ್ಷಗಳ ಹಿಂದೆ ಒಬ್ಬಂಟಿಯಾಗಿಯೇ ಕೈಹಾಕಿದ 45 ವರ್ಷದ ಜಲಂಧರ ನಾಯಕನ  ಶ್ರಮವನ್ನು ಕೊನೆಗೂ ಜಿಲ್ಲಾಡಳಿತ ಗಮನಿಸಿ ಆತ ಎರಡು ವರ್ಷ ಪಟ್ಟ ಶ್ರಮಕ್ಕೆ  ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ವಯ ನಿಗದಿತ ವೇತನ ನೀಡಲು ನಿರ್ಧರಿಸಿದೆ.

ಒಡಿಶಾದ ಕಂಧಮಾಲ್ ಜಿಲ್ಲೆಯ ಗುಮ್ಸಹಿ ಎಂಬ ಗ್ರಾಮದ ನಿವಾಸಿಯಾಗಿರುವ  ಜಲಂಧರ ತನ್ನ ಗ್ರಾಮದಿಂದ ಫುಲ್ಬನಿ ಪಟ್ಟಣಕ್ಕೆ ತೆರಳಲು ರಸ್ತೆ ನಿರ್ಮಿಸುವ ಕಾಯಕಕ್ಕೆ ಕೈ ಹಾಕಿದ್ದ. ತನ್ನ ಜೀವನದ 22 ಅಮೂಲ್ಯ ವರ್ಷಗಳನ್ನು 360 ಅಡಿ ಅಗಲದ ರಸ್ತೆ ನಿರ್ಮಿಸಲು ವ್ಯಯಿಸಿದ್ದ ಬಿಹಾರದ ಮೌಂಟೆನ್ ಮ್ಯಾನ್ ದಶರರ್ಥ ಮಂಝಿಯಂತೆಯೇ ತನ್ನ  ದೃಢ ಚಿತ್ತದಿಂದ ಕಳೆದೆರಡು ವರ್ಷಗಳಿಂದ ಜಲಂಧರ 8 ಕಿಮೀ ಉದ್ದದ ರಸ್ತೆಯನ್ನು ನಿರ್ಮಿಸುವಲ್ಲಿ ಆತ ಸಫಲನಾಗಿದ್ದನು. ಮುಂದಿನ ಮೂರು ವರ್ಷಗಳಲ್ಲಿ ಇನ್ನೂ ಏಳು ಕಿಮೀ ಉದ್ದದ ರಸ್ತೆ ನಿರ್ಮಿಸುವ ಇರಾದೆಯನ್ನು ಆತ ಹೊಂದಿದ್ದಾನೆ.  ಆದಿವಾಸಿ ಜನಾಂಗಕ್ಕೆ ಸೇರಿದ ಜಲಂಧರ್ ಅನಕ್ಷರಸ್ಥನಾಗಿದ್ದು ತನ್ನ ಮೂವರು ಮಕ್ಕಳು ಗುಡ್ಡ ದಾಟಿ ಪಕ್ಕದ ಊರಿನ ಶಾಲೆಗೆ ಹೋಗುವ ಕಷ್ಟ ನೋಡಲಾರದೆ ಆತ ಈ ಗುಡ್ಡ ಅಗೆದು ರಸ್ತೆ ನಿರ್ಮಿಸುವ ಕಾಯಕಕ್ಕೆ ಕೈ ಹಾಕಿದ್ದಾನೆ.

ಪ್ರತಿ ದಿನ ತನ್ನ ಹಾರೆ, ಪಿಕ್ಕಾಸನ್ನು ತೆಗೆದುಕೊಂಡು ಹೊರಡುವ ಆತ ಗಂಟೆಗಳ ಕಾಲ ರಸ್ತೆ ನಿರ್ಮಿಸಲು ಪ್ರತಿ ದಿನ ಶ್ರಮಿಸುತ್ತಾನೆ. ಆತನ ಬಗ್ಗೆ ಪತ್ರಿಕೆಗಳಲ್ಲಿ ಓದಿ ತಿಳಿದುಕೊಂಡ ಜಿಲ್ಲಾಧಿಕಾರಿ ಬೃಂದಾ ಜನವರಿ 9ರಂದು ಆತನನ್ನು ತಮ್ಮ ಕಚೇರಿಗೆ ಬರಮಾಡಿಕೊಂಡು ಆತನ ಶ್ರಮವನ್ನು ಕೊಂಡಾಡಿ ರಸ್ತೆ ನಿರ್ಮಿಸಲು ಕಾರ್ಮಿಕರನ್ನು ಒದಗಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಹೇಳಿದ್ದಾರೆ.

ಆಸಕ್ತಿದಾಯಕ ಅಂಶವೆಂದರೆ  ಗುಮ್ಸಹಿ ಎಂಬ ಆ ಗ್ರಾಮದಲ್ಲಿ ವಾಸಿಸುವ ಏಕೈಕ ಕುಟುಂಬ ಜಲಂಧರ್ ನಾಯಕನದ್ದಾಗಿದ್ದು ಇಲ್ಲಿ  ರಸ್ತೆ ಸಂಪರ್ಕ ಹಾಗೂ  ಮೂಲಭೂತ ಸೌಕರ್ಯಗಳಿಲ್ಲದೇ ಇರುವ ಕಾರಣ ಹಲವಾರು ಕುಟುಂಬಗಳು ಬಹಳ ಹಿಂದೆಯೇ ವಲಸೆ ಹೋಗಿದ್ದವು.

ಕಂಧಮಾಲ್ ಉತ್ಸವದ ಸಂದರ್ಭ ಜಲಂಧರ ನಾಯಕನನ್ನು ಸನ್ಮಾನಿಸುವ ಇರಾದೆಯೂ ಜಿಲ್ಲಾಡಳಿತಕ್ಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News