ಪೊಲೀಸ್ ಠಾಣೆ ದಹನದ ಆರೋಪಿಗಳ ಮನೆ ನೆಲಸಮ ಪ್ರಕರಣ: 6 ಕುಟುಂಬಗಳಿಗೆ ಪರಿಹಾರಕ್ಕೆ ಅಸ್ಸಾಂ ಸರಕಾರ ಅನುಮೋದನೆ

Update: 2024-05-04 15:13 GMT

PC : scroll.in

ಗುವಾಹಟಿ: ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಆರೋಪದಲ್ಲಿ 2022ರಲ್ಲಿ ನಾಗಾಂವ್ ಜಿಲ್ಲೆಯಲ್ಲಿ ಪೊಲೀಸರು ಆರೋಪಿಗಳ ಮನೆಗಳನ್ನು ನೆಲಸಮಗೊಳಿಸಿದ ಕಾರಣದಿಂದ ಸಂತ್ರಸ್ತರಾದ 6 ಕುಟುಂಬಗಳಿಗೆ ಅಸ್ಸಾಂ ಸರಕಾರ ಪರಿಹಾರ ನೀಡಲು ಅನುಮೋದನೆ ನೀಡಿದೆ.

ಮೀನು ಮಾರಾಟಗಾರ ಸೈಫಿಕುಲ್ ಇಸ್ಲಾಂ ಅವರನ್ನು ಕಸ್ಟಡಿಯಲ್ಲಿ ಹತ್ಯೆಗೈಯಲಾಗಿದೆ ಎಂದು ಆರೋಪಿಸಿದ ಒಂದು ದಿನದ ಬಳಿಕ ನಾಗಾಂವ್ ಜಿಲ್ಲೆಯ ಬಟದ್ರವಾ ಪೊಲೀಸ್ ಠಾಣೆಗೆ 2022 ಮೇ 21ರಂದು ಬೆಂಕಿ ಹಚ್ಚಲಾಗಿತ್ತು. ಸೈಫಿಕುಲ್ ಇಸ್ಲಾಂ ಅವರನ್ನು ಬಿಡುಗಡೆ ಮಾಡಲು 10 ಸಾವಿರ ರೂ. ನಗದು ಹಾಗೂ ಬಾತುಕೋಳಿಯನ್ನು ಲಂಚವಾಗಿ ಪೊಲೀಸರು ಬೇಡಿಕೆ ಇರಿಸಿದ್ದರು ಎಂದು ಇಸ್ಲಾಮ್ ನ ಕುಟುಂಬ ಆರೋಪಿಸಿತ್ತು.

ಪೊಲೀಸ್ ಠಾಣೆಯನ್ನು ದಹಿಸಿದ ಒಂದು ದಿನದ ಬಳಿಕ ಪೊಲೀಸರು ಆರೋಪಿಗಳ ಮನೆಗಳನ್ನು ನೆಲಸಮಗೊಳಿಸಿದರು. ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಆರೋಪಿಗಳಲ್ಲಿ ಓರ್ವನಾಗಿರುವ ಆಶಿಕುಲ್ ಇಸ್ಲಾಂ ಮೇ 30ರಂದು ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಲು ಪ್ರಯತ್ನಿಸಿದ ಸಂದರ್ಭ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು.

ರಾಜ್ಯ ಗೃಹ ಇಲಾಖೆ ಗುರುವಾರ ನೆಲಸಮಗೊಳಿಸಲಾದ ಪ್ರತಿ ಪಕ್ಕಾ ಮನೆಗಳಿಗೆ 10 ಲಕ್ಷ ರೂ. ಹಾಗೂ ಕಚ್ಚಾ ಮನೆಗಳಿಗೆ 2.5 ಲಕ್ಷ ರೂ. ನೀಡಲಾಗುವುದು ಎಂದು ಅಸ್ಸಾಂ ಹಿರಿಯ ಸರಕಾರಿ ವಕೀಲ ದೀಪಂಕರ್ ನಾಥ್ಗೆ ತಿಳಿಸಿದ್ದಾರೆ.

‘‘ಅನುಮತಿಗಾಗಿ ಆನ್ಲೈನ್ ಮಂಜೂರಾತಿ ಪ್ರಸ್ತಾವನೆಯನ್ನು 30/04/2024ರಂದು ಹಣಕಾಸು ಇಲಾಖೆಗೆ ಕಳುಹಿಸಲಾಗಿದೆ’’ ಎಂದು ಗೃಹ ಇಲಾಖೆ ತಿಳಿಸಿದೆ. ‘‘ಈಗ ಹಣಕಾಸು ಇಲಾಖೆಯ ಅನುಮತಿಗಾಗಿ ಕಾಯಲಾಗುತ್ತಿದೆ. ಈ ಇಲಾಖೆಯಿಂದ ಒಪ್ಪಿಗೆ ಸ್ವೀಕರಿಸಿದ ಬಳಿಕ ಪರಿಹಾರ ಪಾವತಿಯನ್ನು ಪೂರ್ಣಗೊಳಿಸಲಾಗುತ್ತದೆ’’ ಎಂದು ಅವರು ತಿಳಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News