ನ್ಯಾಯಾಂಗ ವ್ಯವಸ್ಥೆಯಲ್ಲಿನ ಘರ್ಷಣೆ ಸರಿಪಡಿಸಲು ಎಚ್‌ಡಿಕೆ ಆಗ್ರಹ

Update: 2018-01-12 15:26 GMT

ಬೆಂಗಳೂರು, ಜ.12: ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ನಡೆಯಬಾರದ ಘಟನೆ ನಡೆದಿದೆ. ಶತಮಾನಗಳಿಂದ ನ್ಯಾಯಾಂಗದ ಬಗ್ಗೆ ಸಾರ್ವಜನಿಕವಾಗಿ ಚರ್ಚೆಗೆ ಆಸ್ಪದ ಇರಲಿಲ್ಲ. ರಾಜಕೀಯ ಪಕ್ಷಗಳು, ಅಧಿಕಾರಿಗಳ ವಿಚಾರದಲ್ಲಿ ನಡೆಯುತ್ತಿದ್ದ ಘರ್ಷಣೆ ಈಗ ನ್ಯಾಯಾಂಗ ವ್ಯವಸ್ಥೆಯಲ್ಲಿ ಆಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಗರದ ಜೆ.ಪಿ.ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ವಿದ್ಯಾಭವನದಲ್ಲಿ ಒಮ್ಮೆ ಹೈಕೋರ್ಟ್ ನ್ಯಾಯಾಧೀಶರೊಬ್ಬರು ‘ಈ ವ್ಯವಸ್ಥೆ ಹಾಳಾಗುವ ಮುನ್ನ ಕ್ರಮ ಕೈಗೊಳ್ಳಿ, ನ್ಯಾಯಾಲಯಗಳ ತೀರ್ಪನ್ನು ಕೊಂಡುಕೊಳ್ಳುವ ವ್ಯವಸ್ಥೆ ಆರಂಭವಾಗಿದೆ’ ಎಂದಿದ್ದನ್ನು ಕುಮಾರಸ್ವಾಮಿ ಉಲ್ಲೇಖಿಸಿದರು.

ಸುಪ್ರೀಂಕೋರ್ಟ್‌ನ ನ್ಯಾಯಾಧೀಶರು ಮಾಧ್ಯಮದ ಮುಂದೆ ಬಂದಿದ್ದಾರೆ. ಮುಖ್ಯ ನ್ಯಾಯಾಧೀಶರಿಗೆ ಬರೆದ ಪತ್ರವನ್ನು ಬಹಿರಂಗ ಮಾಡಿದ್ದಾರೆ. ತಕ್ಷಣ ಕೇಂದ್ರ ಸರಕಾರ ಅಥವಾ ರಾಷ್ಟ್ರಪತಿಗಳು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದರೆ, ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನ ನಂಬಿಕೆಯನ್ನು ಕಳೆದುಕೊಳ್ಳಲಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಮಹಾದಾಯಿ ವಿಚಾರದಲ್ಲಿ ರಾಜ್ಯ ಬಂದ್‌ಗೆ ಸರಕಾರ ಬೆಂಬಲಿಸಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಒಂದು ಕಡೆ ಬಿಜೆಪಿ, ಇನ್ನೊಂದು ಕಡೆ ಕಾಂಗ್ರೆಸ್ ನಾಟಕ ಮಾಡುತ್ತಿದೆ. ಇದರಿಂದ, ಜನರಿಗೆ ಯಾವುದೆ ಅನುಕೂಲವು ಆಗುತ್ತಿಲ್ಲ. ಸಮಸ್ಯೆ ಬಗೆಹರಿಸುವ ಪ್ರಯತ್ನವೂ ನಡೆಯುತ್ತಿಲ್ಲ. ಜನರ ನೋವಿನ ಸಮಾಧಿ ಮೇಲೆ ಎರಡೂ ಪಕ್ಷಗಳು ಆಟವಾಡಲು ಹೊರಟಿವೆ ಎಂದು ಅವರು ಟೀಕಿಸಿದರು.

ಮೊದಲು ಯಡಿಯೂರಪ್ಪ ಈ ಅಧ್ಯಾಯವನ್ನು ಆರಂಭಿಸಿದರು. ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ನ್ಯಾಯಾಧೀಕರಣದಲ್ಲಿ ವಿವಾದ ಇತ್ಯರ್ಥವಾಗಲಿ ಎಂದಿದ್ದಾರೆ. ಬಂದ್ ಕರೆಯಿಂದ ಪ್ರಧಾನಿ ಮನಸ್ಸಿನ ಮೇಲೆ ಪರಿಣಾಮ ಬೀರಲಿ. ಅವರು ಬೆಂಗಳೂರಿಗೆ ಬರುವ ಮುನ್ನ ಸಮಸ್ಯೆ ಬಗೆಹರಿಯಲಿ. ಕರ್ನಾಟಕ ಬಂದ್‌ಗೆ ಜೆಡಿಎಸ್ ಬೆಂಬಲವಿದೆ ಎಂದು ಕುಮಾರಸ್ವಾಮಿ ಹೇಳಿದರು.

ವಾಜಪೇಯಿ ಅಧಿಕಾರಾವಧಿಯಲ್ಲಿ ನಮ್ಮ ರಾಜ್ಯಕ್ಕೆ ಮಹಾದಾಯಿ ನೀರು ಬಳಕೆಗೆ ಒಪ್ಪಿಗೆ ಸಿಕ್ಕಿತ್ತು. ಆದರೆ, ಅದನ್ನು ತಡೆ ಹಿಡಿಯುವಂತೆ ಮಾಡಿದ್ದು ಮನೋಹರ್ ಪಾರಿಕ್ಕರ್. ಕಳೆದ 15 ವರ್ಷಗಳಿಂದ ಈ ಯೋಜನೆಗೆ ಅವರು ಪ್ರಬಲವಾಗಿ ವಿರೋಧಿಸುತ್ತಾ ಬಂದಿದ್ದಾರೆ. ನರೇಂದ್ರ ಮೋದಿಯವರು ಈಗ ಹೊಸ ನಾಟಕ ಮಾಡಲು ಮುಂದಾಗಿದ್ದಾರೆ ಎಂದು ಅವರು ಆರೋಪಿಸಿದರು.

ಬಿಜೆಪಿ-ಕಾಂಗ್ರೆಸ್‌ಗಿಂತ ಮೊದಲು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು. ಎರಡೂ ಪಕ್ಷದವರು ನಾವು ಹಿಂದೂಗಳು ಎನ್ನುತ್ತಿದ್ದಾರೆ. ನಾವೂ ಕೂಡ ಹಿಂದೂಗಳೇ. ಹಾಗಾಗಿ, ಮುಹೂರ್ತ ನೋಡಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News