ಮಾಸ್ತಿಗುಡಿ ಪ್ರಕರಣ: ಆರೋಪಿಗಳ ವಿರುದ್ಧದ ದೋಷಾರೋಪ ಪಟ್ಟಿ, ವಿಚಾರಣೆ ರದ್ದುಗೊಳಿಸಿದ ಹೈಕೋರ್ಟ್

Update: 2018-01-12 15:33 GMT

ಬೆಂಗಳೂರು, ಜ.12; ಮಾಸ್ತಿಗುಡಿ ಚಿತ್ರೀಕರಣದ ವೇಳೆ ನಡೆದಿದ್ದ ದುರಂತದಲ್ಲಿ ಖಳನಟರಾದ ಅನಿಲ್ ಮತ್ತು ಉದಯ್ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಉದ್ದೇಶಪೂರ್ವಕವಲ್ಲದ ನರಹತ್ಯೆ ಆರೋಪ ಸಂಬಂಧ ದೋಷಾರೋಪ ಪಟ್ಟಿ ಸಮ್ಮತಿಸಿ ನಿರ್ಮಾಪಕ ಸುಂದರ್ ಪಿ.ಗೌಡ, ನಿರ್ದೇಶಕ ಆರ್.ನಾಗಶೇಖರ್, ಸಹಾಯಕ ನಿರ್ದೇಶಕರಾದ ಎಸ್.ಭರತ್ ರಾವ್, ಮಾರದಪ್ಪ ಮತ್ತು ಸಾಹಸ ನಿರ್ದೇಶಕ ಕೆ.ರವಿಕುಮಾರ್ ಅವರನ್ನು ಆರೋಪಿಗಳನ್ನಾಗಿ ಮಾಡಿದ್ದ ಜೆಎಂಎಫ್‌ಸಿ ಕೋರ್ಟ್ ಮತ್ತು ಪ್ರಕರಣದ ವಿಚಾರಣೆಗೆ ಅಂಗೀಕರಿಸಿದ್ದ ಸೆಷನ್ಸ್ ಕೋರ್ಟ್ ಕ್ರಮವನ್ನು ಹೈಕೋರ್ಟ್ ರದ್ದುಪಡಿಸಿದೆ.

ಐಪಿಸಿ 304 ರಡಿ ಉದ್ದೇಶಪೂರ್ವಕವಲ್ಲದ ನರಹತ್ಯೆ ಆರೋಪ ಸಂಬಂಧ ಮಾಗಡಿ ತಾಲೂಕಿನ ತಾವರೆಕೆರೆ ಪೊಲೀಸ್ ಠಾಣಾ ತನಿಖಾಧಿಕಾರಿಗಳು ಸಲ್ಲಿಸಿದ್ದ ದೋಷಾರೋಪ ಪಟ್ಟಿಯನ್ನು ಸಮ್ಮಿತಿಸಿ, ಈ ಐವರನ್ನು ಆರೋಪಿಗಳನ್ನಾಗಿ ಮಾಡಿ ಒಂದನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು 2017 ಎ.25ರಂದು ಆದೇಶ ಹೊರಡಿಸಿತ್ತು. ತದನಂತರ ಪ್ರಕರಣವನ್ನು ರಾಮನಗರ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಪ್ರಕರಣವನ್ನು ವಿಚಾರಣೆಗೆ ಅಂಗೀರಿಸಿ 2017ರ ಸೆ.15ರಂದು ಆದೇಶ ಹೊರಡಿಸಿತ್ತು. ಈ ಆದೇಶಗಳನ್ನು ಪ್ರಶ್ನಿಸಿ ಐವರು ಆರೋಪಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಗಳ ವಿಚಾರಣೆ ನಡೆಸಿ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕ ಸದಸ್ಯ ಪೀಠ, ಅಧೀನ ನ್ಯಾಯಾಲಯಗಳ ಆದೇಶವನ್ನು ರದ್ದುಪಡಿಸಿತು. ಆದರೆ, ಅರ್ಜಿದಾರರ ವಿರುದ್ಧ ಹೊರಿಸಿರುವ ಆರೋಪವು ಐಪಿಸಿ ಸೆಕ್ಷನ್ 304(ಉದ್ದೇಶಪೂರ್ವಕವಲ್ಲದ ನರಹತ್ಯೆ) ಅಡಿಯಲ್ಲಿ ಬರುವುದಿಲ್ಲ. ಐಪಿಸಿ ಸೆಕ್ಷನ್ 304(ಎ) ಅಜಾಗರೂಕತೆಯಿಂದ ಸಾವು ಸಂಭವಿಸಿದ ಅಪರಾಧ ಕೃತ್ಯದ ವ್ಯಾಪ್ತಿಗೆ ಬರಲಿದೆ ಎಂದು ಅಭಿಪ್ರಾಯಪಟ್ಟು, ಅರ್ಜಿದಾರರ ವಿರುದ್ಧ 304ರಡಿ ಆರೋಪ ಹೊರಿಸಿದ ವಿಚಾರವನ್ನು ರಾಮನಗರ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಹಿಂದಿರುಗಿಸಿ, ಪ್ರಕರಣವನ್ನು ಹೊಸದಾಗಿ ವಿಚಾರಣೆ ನಡೆಸುವಂತೆ ನಿರ್ದೇಶಿಸಿ ತೀರ್ಪು ಪ್ರಕಟಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News