ರಾಜ್ಯ ಚುನಾವಣೆ ಆಯೋಗ, ರಾಜ್ಯ ಸರಕಾರಕ್ಕೆ ಹೈಕೋರ್ಟ್ ತುರ್ತು ನೋಟಿಸ್

Update: 2018-01-12 16:26 GMT

ಬೆಂಗಳೂರು, ಜ.12: ಬೆಂಗಳೂರಿನ ಮಹದೇವಪುರ, ವೈಟ್‌ಫೀಲ್ಡ್‌ನಲ್ಲಿ ಓಟರ್ ಐಡಿಯನ್ನು ಪಡೆದುಕೊಳ್ಳಲು ವಿಳಂಬವಾಗುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಚುನಾವಣಾ ಆಯೋಗ, ರಾಜ್ಯ ಮುಖ್ಯ ಚುನಾವಣಾಧಿಕಾರಿ, ಬಿಬಿಎಂಪಿ ಹಾಗೂ ರಾಜ್ಯ ಸರಕಾರಕ್ಕೆ ತುರ್ತು ನೋಟಿಸ್ ಜಾರಿಗೊಳಿಸಿದೆ.

ವೈಟ್‌ಫೀಲ್ಡ್ ರೈಸಿಂಗ್ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿತು.

ಅರ್ಜಿದಾರರ ಪರ ವಾದಿಸಿದ ವಕೀಲರು, ಕರ್ನಾಟಕದಲ್ಲಿ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದರೂ ಮಹದೇವಪುರ, ವೈಟ್‌ಫೀಲ್ಡ್‌ನಲ್ಲಿ ಹೆಚ್ಚು ಕಂಪ್ಯೂಟರ್ ಇಲ್ಲದ ಕಾರಣಕ್ಕಾಗಿ ನಾಗರಿಕರಿಗೆ ಓಟರ್ ಐಡಿಯನ್ನು ಪಡೆಯಲು ಆಗುತ್ತಿಲ್ಲ. ಹೀಗಾಗಿ, ಹೆಚ್ಚು ಕಂಪ್ಯೂಟರ್‌ಗಳನ್ನು ಅಳವಡಿಸಿ ನಾಗರಿಕರಿಗೆ ವಿಳಂಬವಾಗದ ರೀತಿಯಲ್ಲಿ ಓಟರ್ ಐಡಿಯನ್ನು ನೀಡಬೇಕೆಂದು ಮನವಿ ಮಾಡಿದರು.

ವಕೀಲರ ಮನವಿ ಆಲಿಸಿದ ನ್ಯಾಯಪೀಠವು ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದು ಓಟರ್ ಐಡಿ ಪಡೆಯಲು ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ಆದೇಶಿಸಿ, ಚುನಾವಣೆ ಆಯೋಗ, ರಾಜ್ಯ ಸರಕಾರಕ್ಕೆ ತುರ್ತು ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಜ.22ಕ್ಕೆ ಮುಂದೂಡಿತು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News