ವಲಸಿಗರ ವಿರುದ್ಧ ಹೀನ ಪದ ಬಳಸಿದ ಟ್ರಂಪ್

Update: 2018-01-12 16:58 GMT

ವಾಶಿಂಗ್ಟನ್, ಜ. 12: ಈ 'ಶಿಟ್‌ಹೋಲ್' ದೇಶಗಳ ಜನರು ನಮ್ಮಲ್ಲಿಗೆ ಯಾಕೆ ಬರಬೇಕು ಎಂಬುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಶ್ನಿಸಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.

ಹೈಟಿ, ಎಲ್ ಸಾಲ್ವಡೊರ್ ಮತ್ತು ಆಫ್ರಿಕನ್ ದೇಶಗಳ ವಲಸಿಗರಿಗೆ ರಕ್ಷಣೆ ನೀಡುವ ಪ್ರಸ್ತಾಪವೊಂದನ್ನು ಶ್ವೇತಭವನದ ಓವಲ್ ಕಚೇರಿಯಲ್ಲಿ ಗುರುವಾರ ಸಂಸದರು ಮುಂದಿಟ್ಟಾಗ ಕೆರಳಿದ ಟ್ರಂಪ್ ಈ ರೀತಿ ಎಗರಾಡಿದರು ಎನ್ನಲಾಗಿದೆ.

 ಈ ದೇಶಗಳ ಜನರ ಬದಲಿಗೆ ನಾರ್ವೆ ಮುಂತಾದ ದೇಶಗಳಿಂದ ಹೆಚ್ಚಿನ ಜನರನ್ನು ಅಮೆರಿಕ ಕರೆತರಬೇಕು ಎಂಬ ಸಲಹೆಯನ್ನೂ ಟ್ರಂಪ್ ಬಳಿಕ ನೀಡಿದರು ಎಂದು ಸಭೆಯಲ್ಲಿ ಭಾಗವಹಿಸಿದ್ದ ಹಲವಾರು ಮಂದಿ ಹೇಳಿದ್ದಾರೆ.

ಏಶ್ಯ ದೇಶಗಳ ಹೆಚ್ಚಿನ ವಲಸಿಗರಿಗೆ ಅವಕಾಶ ನೀಡುವ ಇಂಗಿತವನ್ನು ಟ್ರಂಪ್ ವ್ಯಕ್ತಪಡಿಸಿದರು ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಬಳಿಕ ಹೇಳಿದರು. ಯಾಕೆಂದರೆ, ಅವರು ಅಮೆರಿಕಕ್ಕೆ ಆರ್ಥಿಕವಾಗಿ ಸಹಾಯ ಮಾಡುತ್ತಾರೆ ಎಂದು ಟ್ರಂಪ್ ಹೇಳಿದರು.

ಟ್ರಂಪ್ ಮುಖ್ಯವಾಗಿ ಹೈಟಿ ದೇಶದ ಜನರ ವಿರುದ್ಧ ಕೆಂಡ ಕಾರಿದರು ಎನ್ನಲಾಗಿದೆ. ಆ ದೇಶದ ವಲಸಿಗರೊಂದಿಗೆ ಯಾವುದೇ ರೀತಿಯ ಒಪ್ಪಂದ ಮಾಡಿಕೊಳ್ಳಬಾರದು ಎಂಬುದಾಗಿ ಅವರು ಸಂಸದರಿಗೆ ಸಲಹೆ ನೀಡಿದರು.

''ನಮಗೆ ಹೆಚ್ಚಿನ ಹೈಟಿಯನ್ನರು ಯಾಕೆ ಬೇಕು?'' ಎಂದು ಟ್ರಂಪ್ ಪ್ರಶ್ನಿಸಿದರು ಎಂದು ಸಭೆಯಲ್ಲಿ ಭಾಗವಹಿಸಿದ್ದವರು ಹೇಳಿದ್ದಾರೆ. ''ಅವರನ್ನು ಹೊರಗೆ ತಳ್ಳಿ'' ಎಂದರು.

ಅಧ್ಯಕ್ಷರ ಈ ಮಾತುಗಳಿಂದ ಅಲ್ಲಿ ನೆರೆದ ಸಂಸದರು ದಂಗಾದರು.

ವೀಸಾ ಲಾಟರಿ ಕಾರ್ಯಕ್ರಮವನ್ನು 50 ಶೇ.ದಷ್ಟು ಕಡಿತಗೊಳಿಸುವ ಹಾಗೂ ಈಗಾಗಲೇ ವ್ಯವಸ್ಥೆಯಲ್ಲಿ ಇರುವ ದೇಶಗಳಿಗೆ ಆದ್ಯತೆ ನೀಡುವ ಪ್ರಸ್ತಾಪವನ್ನು ಸೆನೆಟರ್‌ಗಳಾದ ಲಿಂಡ್ಸೆ ಗ್ರಹಾಂ ಮತ್ತು ರಿಚರ್ಡ್ ಡರ್ಬಿನ್ ಮಂಡಿಸಿದರು ಎಂದು ಶ್ವೇತಭವನದ ಅಧಿಕಾರಿಯೊಬ್ಬರು ತಿಳಿಸಿದರು.

ವಿಶ್ವಸಂಸ್ಥೆಯ ಮಾನವಹಕ್ಕುಗಳ ಕಚೇರಿ ಆಕ್ಷೇಪ

ಆಫ್ರಿಕ ಮತ್ತು ಹೈಟಿ ದೇಶಗಳ ಜನರನ್ನು 'ಶಿಟ್‌ಹೋಲ್' ದೇಶಗಳ ಜನರು ಎಂಬುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಣ್ಣಿಸಿರುವುದಕ್ಕೆ ವಿಶ್ವಸಂಸ್ಥೆಯ ಮಾನವಹಕ್ಕುಗಳ ಕಚೇರಿ ಆಕ್ಷೇಪ ವ್ಯಕ್ತಪಡಿಸಿದೆ.

 ''ಇವು ಅಮೆರಿಕದ ಅಧ್ಯಕ್ಷರಿಂದ ಬಂದಿರುವ ಆಘಾತಕಾರಿ ಹಾಗೂ ಅವಮಾನಕಾರಿ ಹೇಳಿಕೆಗಳಾಗಿವೆ. ಇದಕ್ಕೆ 'ಜನಾಂಗೀಯವಾದಿ' ಎಂಬ ಪದವನ್ನಲ್ಲದೆ ಬೇರೆ ಯಾವುದೇ ಪದವನ್ನು ಬಳಸಲು ಸಾಧ್ಯವಿಲ್ಲ'' ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಸಂಸ್ಥೆಯ ವಕ್ತಾರ ರೂಪರ್ಟ್ ಕಾಲ್‌ವಿಲ್ ಜಿನೇವದಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದರು.

''ಇಡೀ ದೇಶಗಳನ್ನು ಮತ್ತು ಖಂಡಗಳನ್ನು 'ಶಿಟ್‌ಹೋಲ್' ಎಂಬುದಾಗಿ ಕರೆಯಲು ಸಾಧ್ಯವಿಲ್ಲ. ಅಲ್ಲಿನ ಜನರು ಬಿಳಿಯರಲ್ಲ, ಹಾಗಾಗಿ ಅವರು ಸ್ವಾಗತಾರ್ಹರಲ್ಲ ಎನ್ನಲು ಸಾಧ್ಯವಿಲ್ಲ'' ಎಂದು ಅವರು ಹೇಳಿದರು.

ನಾನು ಹಾಗೆ ಹೇಳಿಲ್ಲ: ಟ್ರಂಪ್

ಈ ನಡುವೆ, ಶ್ವೇತಭವನದಲ್ಲಿ ನಡೆದ ವಲಸಿಗರ ಕುರಿತ ಸಭೆಯಲ್ಲಿ ಆಫ್ರಿಕ ಮತ್ತು ಇತರ ದೇಶಗಳನ್ನು 'ಶಿಟ್‌ಹೋಲ್' ದೇಶಗಳೆಂದು ಕರೆದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ.

''ಇದು ನಾನು ಬಳಸಿದ ಭಾಷೆಯಲ್ಲ'' ಎಂದು ಅವರು ಟ್ವೀಟೊಂದರಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News