ನ್ಯಾ.ಚಲಮೇಶ್ವರ್ : ತಪ್ಪು ಕಂಡರೆ ಹೇಳಲು ಹಿಂಜರಿಯದ ಹಠವಾದಿ

Update: 2018-01-13 06:13 GMT

ಹೊಸದಿಲ್ಲಿ,ಜ.13 : ದೇಶದ ಇತಿಹಾಸದಲ್ಲಿಯೇ ಪ್ರಥಮವೆಂಬಂತೆ ಶುಕ್ರವಾರ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯ ವಿರುದ್ಧ ಬಹಿರಂಗವಾಗಿ ಸಿಡಿದೆದ್ದ  ನಾಲ್ಕು ಮಂದಿ ಹಿರಿಯ ಸುಪ್ರೀಂ ಕೋರ್ಟ್ ನ್ಯಾಯಾಧೀಶರುಗಳ ಪೈಕಿ ಜಸ್ಟಿಸ್  ಜಸ್ತಿ ಚೆಲಮೇಶ್ವರ್  ಅತ್ಯಂತ ಹಿರಿಯ ನ್ಯಾಯಾಧೀಶರು.

ನ್ಯಾ. ಚೆಲಮೇಶ್ವರ್ ಅವರು ಅಸಮ್ಮತಿಯ ದನಿಯೆಂದು ಹಿಂದಿನಿಂದಲೂ ತಿಳಿಯಲ್ಪಟ್ಟವರು. ಸುಪ್ರೀಂ ಕೋರ್ಟಿನ ಕೆಲವೊಂದು ನಿರ್ಧಾರಗಳ ವಿರುದ್ಧ ಅವರು ದನಿಯೆತ್ತಿರುವುದು ಇದೇ ಮೊದಲಲ್ಲ.

ಇತ್ತೀಚಿಗಿನ ವರ್ಷಗಳಲ್ಲಿ ನ್ಯಾ. ಚೆಲಮೇಶ್ವರ್ ಅಸಮ್ಮತಿ ವ್ಯಕ್ತಪಡಿಸಿದ್ದ ಘಟನೆಗಳು :

ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ : 2015ರಲ್ಲಿ ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠವೊಂದು  ನ್ಯಾಯಾಧೀಶರುಗಳ ನೇಮಕಾತಿಯ ಅಧಿಕಾರವನ್ನು ತನ್ನದಾಗಿಸಿಕೊಳ್ಳಲು  ಕಾರ್ಯಾಂಗವು ನಡೆಸಿದ ಪ್ರಯತ್ನವನ್ನು  ವಿಫಲಗೊಳಿಸಿತ್ತು. ಆ ಸಂದರ್ಭ ನ್ಯಾಯಾಧೀಶರು ಇತರ ನ್ಯಾಯಾಧೀಶರ ನೇಮಕಾತಿಯನ್ನು ಗೌಪ್ಯವಾಗಿ ನಡೆಸುವುದರ ವಿರುದ್ಧ ಏಕೈಕ ವಿರೋಧದ ದನಿಯಾಗಿದ್ದ ನ್ಯಾ. ಚೆಲಮೇಶ್ವರ್ ಅವರಿಂದಾಗಿ 1993ರ ಕೊಲೀಜಿಯಂ ಪದ್ಧತಿಯ ಬಗ್ಗೆ ಪ್ರಶ್ನೆಗಳೆದ್ದಿದ್ದವು. ಪಾರದರ್ಶಕತೆಯ ಕೊರತೆಯ ನೆಪದಲ್ಲಿ ಕೊಲೀಜಿಯಂ ಸಭೆಗಳನ್ನು ಬಹಿಷ್ಕರಿಸುವುದಾಗಿ ಚೆಲಮೇಶ್ವರ್ ಸಾರ್ವಜನಿಕವಾಗಿ ಹೇಳಿದ್ದರು. ಕೊಲೀಜಿಯಂ ಕೈಗೊಳ್ಳುತ್ತಿದ್ದ ಗೌಪ್ಯ ನಿರ್ಧಾರಗಳನ್ನು ಸುಪ್ರೀಂ ಕೋರ್ಟಿನ ವೆಬ್‍ಸೈಟಿನಲ್ಲಿ  ಬಹಿರಂಗಪಡಿಸುವಂತೆ ಮುಖ್ಯ ನ್ಯಾಯಮೂರ್ತಿಯನ್ನು ಮನವೊಲಿಸಲೂ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಮೆಡಿಕಲ್ ಕೌನ್ಸಿಲ್ ಲಂಚ ಪ್ರಕರಣ : ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಒಳಗೊಂಡಿದೆಯೆನ್ನಲಾದ ಲಂಚ ಪ್ರಕರಣವೊಂದರ ತನಿಖೆಯನ್ನು  ನ್ಯಾಯಾಲಯದ ಉಸ್ತುವಾರಿಯಲ್ಲಿ ವಿಶೇಷ ತನಿಖಾ ತಂಡ ಸ್ವತಂತ್ರ ತನಿಖೆ  ನಡೆಸಿಬೇಕೆಂದು ಕೋರಿ ವಕೀಲೆ ಕಾಮಿನಿ ಜೈಸ್ವಾಲ್ ಅವರು ಸಲ್ಲಿಸಿದ್ದ ಅಪೀಲನ್ನು ನವೆಂಬರ್ 2017ರಲ್ಲಿ ನ್ಯಾ. ಚೆಲಮೇಶ್ವರ್ ಅವರ ನೇತೃತ್ವದ ಪೀಠವೊಂದು ವಿಚಾರಣೆಗೆ ಕೈಗೆತ್ತಿಕೊಂಡಿತ್ತು.

ಮುಖ್ಯ ನ್ಯಾಯಮೂರ್ತಿ ಈ ಹಿಂದೆ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ  ಪ್ರಕರಣಗಳಲ್ಲಿ ವಕೀಲರಾಗಿದ್ದರಿಂದ ಅವರು ಈ ಪ್ರಕರಣದ ವಿಚಾರಣೆ ನಡೆಸುವ ಪೀಠದಲ್ಲಿರಬಾರದೆಂದು ಅಪೀಲಿನಲ್ಲಿ ತಿಳಿಸಲಾಗಿತ್ತು. ಈ ಪ್ರಕರಣವನ್ನು ನ್ಯಾ. ಚೆಲಮೇಶ್ವರ್ ಅವರು ಪಂಚ ಸದಸ್ಯರ ಸಾಂವಿಧಾನಿಕ ಪೀಠಕ್ಕೆ ಹಸ್ತಾಂತರಿಸಿದರೂ ಅವರ ಆದೇಶವನ್ನು ಮೀರಿ ಮುಖ್ಯ ನ್ಯಾಯಮೂರ್ತಿ ಮಿಶ್ರಾ ಅವರು ಹೊಸ ಪಂಚ ನ್ಯಾಯಾಧೀಶರ ಪೀಠ ಸ್ಥಾಪಿಸಿದ್ದರು. "ನ್ಯಾಯಾಲಯದ ಪೀಠಗಳನ್ನು ರಚಿಸುವ ಕುರಿತಾಗಿ ಮುಖ್ಯ ನ್ಯಾಯಮೂರ್ತಿಯ ನಿರ್ಧಾರವೇ ಅಂತಿಮ'' ಎಂದು ಆಗ ನ್ಯಾ. ಮಿಶ್ರಾ ಹೇಳಿದ್ದರು.

ಮುಖ್ಯ ನ್ಯಾಯಮೂರ್ತಿಯಾಗುವ ಅವಕಾಶ ಕಳೆದುಕೊಂಡಿದ್ದ ಚೆಲಮೇಶ್ವರ್

1997ರಲ್ಲಿ ಆಂಧ್ರ ಪ್ರದೇಶ ಹೈಕೋರ್ಟಿನಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದ ನ್ಯಾ. ಚೆಲಮೇಶ್ವರ್ ಅವರು ಮೇ 2007ರಲ್ಲಿ ಗುವಹಾಟಿ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಆದರೆ ಆಕ್ಟೋಬರ್ 2011ರ ತನಕ ಅವರಿಗೆ ಸುಪ್ರೀಂ ಕೋರ್ಟಿಗೆ ಪದೋನ್ನತಿ ನೀಡಲಾಗಿರಲಿಲ್ಲ. ಸಕಾರಣವಿಲ್ಲದ ಈ ವಿಳಂಬದಿಂದಾಗಿ ಅವರು ಮುಖ್ಯ ನ್ಯಾಯಮೂರ್ತಿಯಾಗುವ ಅವಕಾಶ ಕಳೆದುಕೊಂಡಿದ್ದರು.

ಐಟಿ ಕಾಯಿದೆಯ ಸೆಕ್ಷನ್ 66ಎ ಇದರ ರದ್ದತಿ,  ಆಧಾರ್ ನಿಂದಾಗಿ ಖಾಸಗಿತನಕ್ಕೆ ಚ್ಯುತಿ ಬರುವುದೆಂಬ ಆತಂಕಕ್ಕೆ ಸಂಬಂಧಿಸಿದ ಪ್ರಕರಣವನ್ನು ದೊಡ್ಡ ಸಾಂವಿಧಾನಿಕ ಪೀಠವೊಂದಕ್ಕೆ ವಹಿಸಿದ್ದು ಅವರ ಹೆಗ್ಗಳಿಕೆಯಾಗಿತ್ತು,

ನ್ಯಾ. ಚೆಲಮೇಶ್ವರ್ ಅವರು ಈ ವರ್ಷದ ಜೂನ್ ತಿಂಗಳಲ್ಲಿ ನಿವೃತ್ತರಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News