ತಾಯಿ ತಾಳ್ಮೆಯ ರತ್ನಪ್ರಭಾ

Update: 2018-01-13 18:41 GMT

ಜನವರಿ 5ರಂದು ಹೊಸದಿಲ್ಲಿಯ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಉನ್ನತ ಮಟ್ಟದ ಅಧಿಕಾರಿಗಳನ್ನು ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ, ‘‘ಹೆಸರು ಮರೆತಿದ್ದೇನೆ, ಆ ಹಿರಿಯ ಅಧಿಕಾರಿ ಮಾಡಿದ ಟ್ವೀಟ್ ನನ್ನ ನೆನಪಿನಲ್ಲಿದೆ’’ ಎಂದು ಜ್ಞಾಪಿಸಿಕೊಂಡು, ಕುರಿಗಾಹಿಯೊಬ್ಬನಿಗೆ ಅಧಿಕಾರಿ ನೆರವಾಗಿದ್ದು, ಆತ ಓದಿ ವಿದ್ಯಾವಂತನಾಗಿ, ಪೊಲೀಸ್ ಕೆಲಸಕ್ಕೆ ಸೇರಿದ್ದು, ಹಿರಿಯ ಅಧಿಕಾರಿಯನ್ನು ಅಚಾನಕ್ ಆಗಿ ಭೇಟಿಯಾಗಿ, ನಿಮ್ಮಿಂದ ಇಂದು ನಾನು ಮನುಷ್ಯನಾದೆ ಎಂದದ್ದನ್ನು ವಿವರಿಸಿ, ಇಂಥವರು ನಿಮ್ಮ ಮಾದರಿಯಾಗಬೇಕು ಎಂದಿದ್ದರು.

ಪ್ರಧಾನಿಯಿಂದ ಪ್ರಶಂಸೆಗೊಳಗಾದ ಆ ಅಧಿಕಾರಿ ಅದೇ ಸಭೆಯಲ್ಲಿದ್ದರು. ತಮ್ಮ ಬದುಕಿನ ಬಹುಮುಖ್ಯ ಘಟನೆಗೆ ಖುದ್ದು ಸಾಕ್ಷಿಯಾಗಿದ್ದರು. ಅನಿರ್ವಚನೀಯ ಪುಲಕಕ್ಕೊಳಗಾಗಿದ್ದರು. ಅವರೇ ಐಎಎಸ್ ಅಧಿಕಾರಿ ಕೆ.ರತ್ನಪ್ರಭಾ, ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿ.

ರತ್ನಪ್ರಭಾ ಅವರು ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿಯಾದ ನಂತರ, ಅಚಾನಕ್ ಆಗಿ ಒಬ್ಬ ಪೊಲೀಸ್ ಪೇದೆ ಬಂದು, ಹೂಗುಚ್ಛ ನೀಡಿ, ‘‘ಅಮ್ಮ ನೀವು ಅಂದು ನನ್ನನ್ನು ಶಾಲೆಗೆ ಸೇರಿಸಿದ್ದರಿಂದ, ಇಂದು ನಾನು ಕಾನ್‌ಸ್ಟೇಬಲ್ ಆಗಿ ನಿಮ್ಮ ಮುಂದೆ ನಿಂತಿದ್ದೇನೆ’’ ಎಂದು ತಮ್ಮ ಕತೆ ಹೇಳಿದ್ದರು. ರತ್ನಪ್ರಭಾ ಅವರು 27 ವರ್ಷಗಳ ಹಿಂದೆ ರಾಯಚೂರು ಜಿಲ್ಲಾಧಿಕಾರಿಯಾಗಿದ್ದಾಗ, ಇಡಪನೂರು ಎಂಬ ಹಳ್ಳಿಯಲ್ಲಿ ಗೋಲಿಬಾರ್ ಆಗಿತ್ತು. ಅಲ್ಲಿಗೆ ಭೇಟಿ ನೀಡುವ ಸಂದರ್ಭದಲ್ಲಿ, ಕುರಿ ಕಾಯುತ್ತಿದ್ದ ಬಾಲಕನನ್ನು ಕಂಡು ‘‘ಸ್ಕೂಲಿಗೆ ಹೋಗಲ್ವ’’ ಎಂದಿದ್ದರು. ‘‘ಮನೆ ಸ್ಥಿತಿ ಸರಿಯಿಲ್ಲ, ಕೂಲಿ ಮಾಡಿದ್ರೆ ಊಟ, ಇನ್ನೆಲ್ಲಿ ಇಸ್ಕೂಲು’’ ಎಂದಿದ್ದ. ರತ್ನಪ್ರಭಾರಿಗೆ ಅದೇನನ್ನಿಸಿತೋ, ಆ ಬಾಲಕನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಶಾಲೆಗೆ ಸೇರಿಸಿ, ಮುಖ್ಯಶಿಕ್ಷಕ ಜನಾರ್ದನರಿಗೆ ಸೂಕ್ತ ನಿರ್ದೇಶನ ನೀಡಿದ್ದರು. ಅಂದು ರತ್ನಪ್ರಭಾ ಅವರು ಮಾಡಿದ ಸಣ್ಣ ಸಹಾಯ ಆತನ ಬದುಕನ್ನೇ ಬದಲಿಸಿತು. ಬಾಲಕ ನರಸಪ್ಪಇಂದು ರಾಜ್ಯ ಗುಪ್ತಚರ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ತನಗೆ ಸಹಾಯ ಮಾಡಿದ ಜಿಲ್ಲಾಧಿಕಾರಿ ಈಗ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಆಗಿರುವುದಕ್ಕೆ ಸಂತಸಗೊಂಡಿರುವ ನರಸಪ್ಪ, ಖುದ್ದು ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ತಮಗೆ ಮಾಡಿದ ಸಹಾಯವನ್ನು ನೆನಪಿಸಿ ಕೃತಜ್ಞತೆ ಹೇಳಿದ್ದಾರೆ. ಅದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಅದನ್ನು ಗಮನಿಸಿದ್ದ ಪ್ರಧಾನಿ ಮೋದಿ, ಇಂಥವರು ನಿಮಗೆ ಮಾದರಿಯಾಗಲಿ ಎಂದು ರತ್ನ್ರಭಾರ ಕಾರ್ಯವನ್ನು ಶ್ಲಾಘಿಸಿದ್ದರು.

ಒಬ್ಬ ಅಧಿಕಾರಿ ತನ್ನ ಅಧಿಕಾರವನ್ನು ಹೀಗೆ ಜನಪರವಾಗಿ, ಮಾನವೀಯ ನೆಲೆಯಲ್ಲಿ ಬಳಸಿದ್ದೇ ಆದರೆ, ಅದು ಎಂತಹ ಫಲಿತಾಂಶ ನೀಡಬಲ್ಲದು ಎಂಬುದಕ್ಕೆ ಮೇಲಿನದು ಒಂದು ಪುಟ್ಟ ಉದಾಹರಣೆ ಮಾತ್ರ. ಹಾಗೆ ನೋಡಿದರೆ ರತ್ನಪ್ರಭಾ ಅವರ ಈ ಬಗೆಯ ಕಾಳಜಿ ಕಳಕಳಿಯ ಕೆಲಸ ಇದೊಂದೇ ಅಲ್ಲ, ಬೀದರ್ ಜಿಲ್ಲೆಯಲ್ಲಿ ಎಸಿ ಆಗಿದ್ದಾಗ ನೆರೆ ಪ್ರವಾಹದಿಂದ ಇಡೀ ಊರನ್ನೇ ಸ್ಥಳಾಂತರ ಮಾಡಿಸಿದ್ದು, ಹಾಗೆ ಸ್ಥಳಾಂತರ ಮಾಡುವಾಗ ಊರಿನ ಗೌಡರೇ ತಮ್ಮ ಭೂಮಿ ನೀಡಿ ನೆರವಿಗೆ ನಿಂತಿದ್ದು, ನಂತರ ಅವರಿಗೆ ಬೇರೆಡೆ ಭೂಮಿ ನೀಡಿದ್ದನ್ನು ಅದೆಷ್ಟೋ ವರ್ಷಗಳ ನಂತರ ಆ ಗೌಡರ ಮಗ ಬಂದು, ನೆನಪಿಸಿ, ಕೈ ಮುಗಿದುಹೋಗಿದ್ದ. ಹುಮನಾಬಾದಿನ ಹುಲಿಯಪ್ಪನ ತಾಯಿಯ ಹೆಬ್ಬೆಟ್ಟು ಒತ್ತಿಸಿಕೊಂಡ ಊರಿನ ಸಾಹುಕಾರ ಅವರ ಜಮೀನು ಕಿತ್ತುಕೊಂಡಿದ್ದನ್ನು ಬಿಡಿಸಿ ಕೊಟ್ಟಾಗ, ಹುಲಿಯಪ್ಪ ಬಂದು ಧನ್ಯವಾದ ಹೇಳಿಹೋಗಿದ್ದರು. ಶಿಕ್ಷಕರೊಬ್ಬರ ಮನೆಗೆ ಬಾಡಿಗೆಗೆ ಬಂದವರು, ಕೋರ್ಟಿಗೆ ಹೋಗಿ ಅವರ ಹೆಸರಿಗೆ ಮಾಡಿಸಿಕೊಂಡಿದ್ದನ್ನು ಪೊಲೀಸ್ ಜೊತೆ ಹೋಗಿ ಮನೆ ಬಿಡಿಸಿಕೊಟ್ಟಿದ್ದರು. ಹದಿನೈದು ವರ್ಷಗಳ ನಂತರ, ಶಿಕ್ಷಕರು ಬಂದು ಮಗಳ ಮದುವೆ ಆಹ್ವಾನ ಪತ್ರ ಕೊಟ್ಟು ನೆರವನ್ನು ಸ್ಮರಿಸಿದ್ದರು. ರಾಯಚೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ ಗಣೇಶೋತ್ಸವ ಸಮಯದಲ್ಲಿ ಕೋಮುಗಲಭೆಯಾಗಿ, ಹಿಂದೂ-ಮುಸ್ಲಿಮರ ನಡುವೆ ಕದನವೇರ್ಪಟ್ಟು, ಪರಿಸ್ಥಿತಿ ವಿಕೋಪಕ್ಕೆ ಹೋದಾಗ, ಆ ಪ್ರಕ್ಷುಬ್ಧ್ದ ಸಮಯದಲ್ಲಿ, ರಾತ್ರಿ 2 ಗಂಟೆಗೆ ಘಟನಾ ಸ್ಥಳಕ್ಕೆ ಖುದ್ದು ಭೇಟಿ ನೀಡಿ, ಅದನ್ನು ಅತ್ಯಂತ ನಾಜೂಕಿನಿಂದ ನಿರ್ವಹಿಸಿ, ತಿಳಿಗೊಳಿಸಿದ ಕೀರ್ತಿಗೆ ಭಾಜನರಾಗಿದ್ದನ್ನು ಅಲ್ಲಿನ ಜನ ಈಗಲೂ ನೆನಪಿಸಿಕೊಳ್ಳುತ್ತಾರೆ. ಹೀಗೆ ಅವರು ಹೋದ ಕಡೆಗಳಲ್ಲೆಲ್ಲ ಅವರ ಅಧಿಕಾರ ಮಾನವೀಯ ನೆಲೆಯಲ್ಲಿ ಅನಾವರಣಗೊಂಡಿದೆ.

1981ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾದ ರತ್ನಪ್ರಭಾ ಅವರು ಮೊದಲು 1983ರಲ್ಲಿ ಬೀದರ್ ಜಿಲ್ಲೆಯ ಅಸಿಸ್ಟೆಂಟ್ ಕಮಿಷನರ್ ಆಗಿ ನೇಮಕಗೊಂಡಾಗ, ಮೊದಲ ಮಹಿಳಾ ಅಧಿಕಾರಿ ಅವರೇ ಆಗಿದ್ದರು. ಅಲ್ಲಿಂದಲೇ ಅವರ ಜನಸೇವೆ ಶುರುವಾಗಿತ್ತು. ಜನರ ಕಷ್ಟಗಳಿಗೆ ಕಿವಿಯಾಗುತ್ತಾ, ಸಮಸ್ಯೆಗಳಿಗೆ ಸ್ಪಂದಿಸುತ್ತಾ ಜನಾನುರಾಗಿ ಅಧಿಕಾರಿ ಎಂಬ ಹೆಸರು ಗಳಿಸಿದ್ದರು. ಜನರನ್ನಷ್ಟೇ ಅಲ್ಲ, ಅಧಿಕಾರಿಗಳನ್ನೂ ಅಪಾರವಾಗಿ ಪ್ರಭಾವಿಸಿದ್ದರು. 1984ರಲ್ಲಿ ತಮ್ಮ ಕೈ ಕೆಳಗಿನ ಅಧಿಕಾರಿಯೊಬ್ಬರಿಗೆ ಹೆಣ್ಣುಮಗು ಹುಟ್ಟಿದಾಗ, ಅದಕ್ಕೆ ಅವರು ‘ರತ್ನಪ್ರಭಾ’ ಎಂದು ಹೆಸರಿಟ್ಟಿದ್ದರು. ‘ಅವಳೂ ನಿಮ್ಮಂತೆಯೇ ಆಗಲಿ’ ಎನ್ನುವ ಆಶಯ ಆ ಕೂಸಿನ ಪೋಷಕರದ್ದು. ಈ ಪ್ರೇರಣೆ, ಸ್ಫೂರ್ತಿ ಸಾಮಾನ್ಯದ್ದಲ್ಲ. ಅಂದಿನಿಂದ ಇಂದಿನವರೆಗೆ, ಹಲವಾರು ಜಿಲ್ಲೆಗಳಲ್ಲಿ, ಸುಮಾರು 36 ವರ್ಷಗಳ ಸುದೀರ್ಘ ಸೇವಾವಧಿಯುದ್ದಕ್ಕೂ ಅಪಾರ ಸಹನೆ, ತಾಳ್ಮೆ, ಮಾನವೀಯ ನೆಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ದಿಟ್ಟ, ದಕ್ಷ ಅಧಿಕಾರಿ ಎಂದು ಹೆಸರು ಪಡೆದಿದ್ದಾರೆ. ಜನಮನ ಗೆದ್ದಿದ್ದಾರೆ. ಅಧಿಕಾರಸ್ಥ ರಾಜಕಾರಣಗಳೊಂದಿಗೆ ಆಡಳಿತಾತ್ಮಕ ವಿಷಯಗಳಲ್ಲಿ ಸರಿಸಮಾನವಾಗಿ ಕೂತು ಚರ್ಚಿಸಿ ಸೈ ಎನಿಸಿಕೊಂಡಿದ್ದಾರೆ. ಹಂತ ಹಂತವಾಗಿ ಮೇಲೇರಿ ಇಂದು ರಾಜ್ಯದ ಅತ್ಯುನ್ನತ ಹುದ್ದೆಯಾದ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಿದ್ದಾರೆ.

ಒಬ್ಬ ಐಎಎಸ್ ಅಧಿಕಾರಿಗೆ, ರಾಜ್ಯದ ಮಟ್ಟದಲ್ಲಿ ಸಿಗಬಹುದಾದ ಅತ್ಯುನ್ನತ ಹುದ್ದೆ ಮತ್ತು ಗೌರವ- ಮುಖ್ಯ ಕಾರ್ಯದರ್ಶಿ ಸ್ಥಾನ. ಮುಖ್ಯಮಂತ್ರಿಯ ನಂತರದ ಉನ್ನತ ಅಧಿಕಾರ. ರಾಜ್ಯ ಸಚಿವಾಲಯ ಮತ್ತು ಕಾರ್ಯಾಂಗಕ್ಕೆ ಇವರೇ ಮುಖ್ಯಸ್ಥರು. ರಾಜ್ಯ ಸರಕಾರ ಕೈಗೊಳ್ಳುವ ಮಹತ್ವದ ತೀರ್ಮಾನಗಳಿಗೆಲ್ಲ ಸಾಕ್ಷಿಯಾಗುವವರು. ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸಲಹೆ-ಸೂಚನೆ-ಆದೇಶ ನೀಡುವ ಜವಾಬ್ದಾರಿಯುತ ಸ್ಥಾನದಲ್ಲಿರುವವರು. ಅಷ್ಟೇ ಅಲ್ಲ, ಬೇರೆ ರಾಜ್ಯಗಳು ಅಥವಾ ಕೇಂದ್ರ ಸರಕಾರದ ಜೊತೆ ಆಡಳಿತಕ್ಕೆ ಸಂಬಂಧಿಸಿದ ಪತ್ರ ವ್ಯವಹಾರ ಮತ್ತು ಆಡಳಿತಾತ್ಮಕ ನಿಲುವು-ನಿರ್ಧಾರಗಳನ್ನು ಕೈಗೊಳ್ಳುವವರು. ಕೇಂದ್ರ ಸರಕಾರ, ಯಾವುದೇ ಮಹತ್ವದ ಸೂಚನೆ ನೀಡಿದರೂ, ಅದನ್ನು ಅನುಷ್ಠಾನಕ್ಕೆ ತರುವ ಜವಾಬ್ದಾರಿ ಹೊತ್ತವರು. ಇಂತಹ ಅತೀ ಮಹತ್ವದ ಸ್ಥಾನಕ್ಕೆ ಮಹಿಳೆಯನ್ನು ನೇಮಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ದಿಟ್ಟ ನಿರ್ಧಾರಗಳಲ್ಲೊಂದು. ಕರ್ನಾಟಕದಲ್ಲಿ ಈ ಹಿಂದೆ 2001-02ರಲ್ಲಿ ತೆರೇಸಾ ಭಟ್ಟಾಚಾರ್ಯ ಎಂಟು ತಿಂಗಳು, 2006ರಲ್ಲಿ ಮಾಲತಿ ದಾಸ್ ಮೂರು ತಿಂಗಳ ಅವಧಿಗೆ ಮುಖ್ಯಕಾರ್ಯದರ್ಶಿಯಾಗಿದ್ದರು. ರತ್ನಪ್ರಭಾ ಅವರು ಮೂರನೇ ಮಹಿಳಾ ಅಧಿಕಾರಿಯಾಗಿದ್ದು, 2018 ಮಾರ್ಚ್‌ನಲ್ಲಿ ನಿವೃತ್ತರಾಗಲಿದ್ದಾರೆ.

ಇಂದು ಐಎಎಸ್ ಅಧಿಕಾರಿ ಎಂದರೆ ಒಂದು ಜಿಲ್ಲೆಯ ಮಹಾರಾಜರಿಗೆ ಸಮ. ಅವರ ಜೀವನಶೈಲಿ, ಆಳುಕಾಳು, ಸಂಬಳ, ಸವಲತ್ತು ಸಾಮಾನ್ಯನ ಊಹೆಗೆ ನಿಲುಕದ್ದು. ಇನ್ನು ಅಧಿಕಾರ ಮತ್ತು ಪ್ರಭಾವವಂತೂ ಹೇಳತೀರದು. ಇದಕ್ಕೆ ಜಾತಿ ಮತ್ತು ಹಣ ಸೇರಿಬಿಟ್ಟರೆ ಅವರನ್ನು ಹಿಡಿಯಲಾಗುವುದಿಲ್ಲ. ಅವರು ಮಂತ್ರಿಗಳ ಮಾತನ್ನೂ ಕೇಳುವುದಿಲ್ಲ. ಬೇರೆ ರಾಜ್ಯದಿಂದ ಬಂದವರಾದರೆ ಅವರು ಕನ್ನಡವನ್ನೂ ಕಲಿಯುವುದಿಲ್ಲ. ಆದರೆ ಈ ನಮ್ಮ ರತ್ನಪ್ರಭಾ ಅವರಂಥಲ್ಲ. ತಾವೊಬ್ಬ ಉನ್ನತ ಸ್ಥಾನದಲ್ಲಿರುವ ಅಧಿಕಾರಿ ಎನ್ನುವುದನ್ನೂ ಬದಿಗಿಟ್ಟು, ಇಂದಿರಾ ಕ್ಯಾಂಟೀನ್‌ಗೆ ಭೇಟಿ ಕೊಟ್ಟು, ಸಾಮಾನ್ಯರಂತೆ ಟೋಕನ್ ಪಡೆದು ತಿಂಡಿ ತಿನ್ನುತ್ತಾರೆ. ಬಡವರು ಬರುವ ಜಾಗ ಅಚ್ಚುಕಟ್ಟಾಗಿರಲಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡುತ್ತಾರೆ. ಅವರ ಸಜ್ಜನಿಕೆ, ಕಾರ್ಯಕ್ಷಮತೆ, ಬುದ್ಧಿವಂತಿಕೆ ಈ ನಾಡಿಗಾಗಿ ವಿನಿಯೋಗವಾಗಿದೆ. ಹಾಗೆಯೇ ಕರ್ನಾಟಕ ಕೂಡ ಅವರಿೆ ಉನ್ನತ ಸ್ಥಾನ ನೀಡಿ ಗೌರವಿಸಿದೆ.

ಹಸಿರು, ಕೆಂಪು, ನೀಲಿ, ಹಳದಿಯಂತಹ ಗಾಢ ಬಣ್ಣದ ರೇಷ್ಮೆ ಸೀರೆ ಉಡುವ, ತುಂಬು ತೋಳಿನ ರವಿಕೆ ತೊಡುವ, ಮೈ ತುಂಬ ಸೆರಗೊದ್ದುಕೊಳ್ಳುವ, ಮಲ್ಲಿಗೆ ಮುಡಿಯುವ, ಪ್ರಶಾಂತ ಮುಖಕ್ಕೆ ಬೊಟ್ಟೊಂದನ್ನು ಬಿಟ್ಟು ಬೇರೆ ಮೇಕಪ್ ಮಾಡದ, ಅಪ್ಪಟ ಗೃಹಿಣಿಯಂತೆ, ನಮ್ಮದೇ ಮನೆಯ ದೊಡ್ಡಮ್ಮನಂತೆ ಕಾಣುವ ರತ್ನಪ್ರಭಾ, ತಾಯಿ ತಾಳ್ಮೆಯ ಅಂತಃಕರಣವುಳ್ಳವರು. ತಾವು ರಾಜ್ಯದ ಅತ್ಯುನ್ನತ ಹುದ್ದೆಯಲ್ಲಿರುವ ಐಎಎಸ್ ಅಧಿಕಾರಿ ಎನ್ನುವ ಯಾವ ಹಮ್ಮು ಬಿಮ್ಮುಗಳಿಲ್ಲದ, ಎಲ್ಲರನ್ನು ನಗುನಗುತ್ತಲೇ ಮಾತನಾಡಿಸುವ, ಕೆಲಸದ ವಿಚಾರಕ್ಕೆ ಬಂದರೆ ಶಿಸ್ತು, ಶ್ರದ್ಧೆ, ಸಮಯಪಾಲನೆಗೆ ಒತ್ತು ಕೊಡುವ, ಮೈಗಳ್ಳ ಅಧಿಕಾರಿಗಳನ್ನು ಕಂಡರೆ ಕೆಂಡವಾಗುವ ನಿಷ್ಠುರವಾದಿ.

ತಂದೆಚಂದ್ರಯ್ಯ, ದೇಶದ ಮೊದಲ ಬ್ಯಾಚ್ ಐಎಎಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಹೈದರಾಬಾದ್ ಕಲೆಕ್ಟರ್ ಆಗಿದ್ದವರು. ತಾಯಿ ಡಾಕ್ಟರ್, ಉಡುಪಿ ಕಡೆಯ ಕೊಂಕಣಿ. 1958ರಲ್ಲಿ, ದಲಿತ ವಿದ್ಯಾವಂತ ಕುಟುಂಬದಲ್ಲಿ, ಹೈದರಾಬಾದ್‌ನಲ್ಲಿ ಜನಿಸಿದ ರತ್ನಪ್ರಭಾ ಓದಿದ್ದು ಸಮಾಜಶಾಸ್ತ್ರ ಮತ್ತು ಇಂಗ್ಲಿಷ್‌ನಲ್ಲಿ ಎಂಎ. ಅಪ್ಪನ ತೆಲುಗು, ಅಮ್ಮನ ಕೊಂಕಣಿಯ ಜೊತೆಗೆ ಕನ್ನಡವನ್ನೂ ಕಲಿತು, ಇಂದು ಕನ್ನಡದವರೇ ಆಗಿದ್ದಾರೆ. ಜೊತೆಗೆ ಫ್ರೆಂಚ್ ಭಾಷೆಯನ್ನು ಕೂಡ ಕಲಿತಿದ್ದಾರೆ. ‘‘ಬ್ಯಾಡ್ಮಿಂಟನ್, ಟೇಬಲ್ ಟೆನಿಸ್ ಆಟವೆಂದರೆ ಇಷ್ಟ. ಫೋಟೊಗ್ರಫಿ ಹವ್ಯಾಸವೂ ಉಂಟು. ಶಾಪಿಂಗ್ ಅಂದ್ರೆ ಬೋರ್- ಸೀರೆ ಆರಿಸುವಷ್ಟು ಚೌಕಾಸಿ ಮಾಡುವಷ್ಟು ತಾಳ್ಮೆಯಿಲ್ಲ. ಟಿವಿ- ಸೀರಿಯಲ್‌ಗಳನ್ನು ನೋಡಲ್ಲ, ನ್ಯೂಸ್ ಚಾನಲ್ಸ್ ಮಾತ್ರ. ಸಿನೆಮಾ- ಕಾಲೇಜ್ ಡೇಸ್‌ನಲ್ಲಿ ನೋಡ್ತಿದ್ದೆ, ಈಗ ಕುಟುಂಬದೊಂದಿಗೆ ಅಪರೂಪಕ್ಕೆ ವೀಕ್ಷಿಸುವುದಿದೆ. ಮೆಡಿಕಲ್ ಮಾಡಬೇಕೆಂಬುದು ಅಮ್ಮನ ಆಸೆಯಾಗಿತ್ತು, ಆದರೆ ಅಪ್ಪನ ಅಧಿಕಾರ, ಅವರ ಗತ್ತು-ಗಾಂಭೀರ್ಯ ಹಾಗೂ ಸದಾ ಜನರೊಂದಿಗೆ ಬೆರೆತು, ಜನರ ಸೇವೆ ಮಾಡುವ ರೀತಿ ಇಷ್ಟವಾಯಿತು. ಐಎಎಸ್ ಮಾಡಿ ಜಿಲ್ಲಾಧಿಕಾರಿಯಾಗಬೇಕೆಂಬ ಆಸೆ ಚಿಕ್ಕಂದಿನಲ್ಲೇ ಇತ್ತು’’ ಎನ್ನುವ ರತ್ನಪ್ರಭಾರಿಗೆ, ಐಎಎಸ್ ಅಧಿಕಾರಿ ಎನ್ನುವುದು ಸವಾಲಿನ ಹಾದಿಯಾಗಿತ್ತು. ಒಂದು ಕಡೆ ಕುಟುಂಬ-ಪತಿ ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದು, ಇಬ್ಬರು ಮಕ್ಕಳ ಚಿಕ್ಕ ಚೊಕ್ಕ ಸಂಸಾರ- ಮತ್ತೊಂದು ಕಡೆ ಆಡಳಿತ- ಎರಡನ್ನೂ ಸಮರ್ಥವಾಗಿ ನಿಭಾಯಿಸಿ ಸೈ ಎನಿಸಿಕೊಂಟಿದ್ದಾರೆ.

‘‘ಬದುಕಿನಲ್ಲಿ ಪೈಪೋಟಿಗಿಂತ ಪ್ಲಾನಿಂಗ್ ಮುಖ್ಯ’’ ಎನ್ನುವುದರಲ್ಲಿ ನಂಬಿಕೆ ಇಟ್ಟ ರತ್ನಪ್ರಭಾ ಅವರು, ಈ ಹಿಂದೆಯೇ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳುವ ಹಿರಿತನ ಮತ್ತು ಅರ್ಹತೆ ಹೊಂದಿದ್ದರೂ, ಪೈಪೋಟಿಗಿಳಿಯದೆ, ಬಂದಾಗ ತಣ್ಣಗೆ ಸ್ವೀಕರಿಸಿ ದೊಡ್ಡತನ ಮೆರೆದರು. ಹಿಂದೊಮ್ಮೆ ಚಿಕ್ಕಮಗಳೂರಿನಲ್ಲಿ ಸೇವೆಯಲ್ಲಿದ್ದಾಗ ಹಿರಿಯರೊಬ್ಬರು, ‘‘ಜಿಲ್ಲಾಧಿಕಾರಿಯಂಥ ಹುದ್ದೆಗೆ ಮಹಿಳೆಯರು ಬರೋದು ಕಡಿಮೆ. ನಿಮ್ಮ ಬದುಕು ಮಹಿಳೆಯರು ಸ್ವಾವಲಂಬಿಗಳಾಗಿ ಬದುಕೋಕೆ ಪ್ರೋತ್ಸಾಹ ನೀಡಬೇಕು. ನಿಮ್ಮಿಂದ ಮಹಿಳೆಯರಿಗೆ ಒಳ್ಳೆಯದಾಗಬೇಕು’’ ಅಂದಿದ್ದನ್ನು ಇವತ್ತಿಗೂ ನೆನಪು ಮಾಡಿಕೊಳ್ಳುತ್ತಾರೆ. ಹಾಗಂತ ಇವರು ಸ್ತ್ರೀವಾದಿಯಾಗಿ ಮಹಿಳಾ ಹಕ್ಕುಗಳಿಗಾಗಿ ಹೋರಾಟಕ್ಕಿಳಿಯಲಿಲ್ಲ. ತಮಗೆ ಸಿಕ್ಕಿದ ಅಧಿಕಾರದ ಇತಿಮಿತಿಯಲ್ಲಿಯೇ ಮಹಿಳೆಯರ ಸಬಲೀಕರಣ ಕ್ಕಾಗಿ- ಮಹಿಳಾ ಟೆಕ್ ಪಾರ್ಕ್, ಮಹಿಳಾ ಉದ್ಯಮಿಗಳಿಗೆ ಸರಕಾರದಿಂದ ಸಿಗುವ ಸೌಲಭ್ಯಗಳಲ್ಲದೆ ಇನ್ನು ಹಲವಾರು ಯೋಜನೆಗಳ ಬಗ್ಗೆ ತಿಳಿಸಿಕೊಡುವಲ್ಲಿ ಶ್ರಮಿಸಿದವರು.

‘‘ನನ್ನ ಕೆಲಸವೇ ನನಗೆ ಸ್ಫೂರ್ತಿ, ಶಕ್ತಿ. ನಾನು ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ. ಒಳ್ಳೆಯದನ್ನು ಮಾಡು, ಒಳ್ಳೆಯದನ್ನೇ ಯೋಚಿಸು. ಇದು ನನ್ನ ಪಾಲಿಸಿ’’ ಎನ್ನುವ ರತ್ನಪ್ರಭಾ, ನಾಡಿನ ಮಹಿಳಾ ಸಮುದಾಯಕ್ಕೆ ಸ್ಫೂರ್ತಿಯಾಗಲಿ, ಇಂಥವರು ಇನ್ನಷ್ಟು ಹೆಚ್ಚಲಿ.

Writer - -ಬಸು ಮೇಗಲಕೇರಿ

contributor

Editor - -ಬಸು ಮೇಗಲಕೇರಿ

contributor

Similar News