×
Ad

‘ಸುಗ್ಗಿ-ಹುಗ್ಗಿ ಸಂಕ್ರಾಂತಿ ಸಂಭ್ರಮ’ಕ್ಕೆ ಸಚಿವೆ ಉಮಾಶ್ರೀ ಚಾಲನೆ

Update: 2018-01-14 18:19 IST

ಬೆಂಗಳೂರು, ಜ.14: ಸಂಕ್ರಮಣ ಒಂದು ಸಾಂಸ್ಕೃತಿಕ ಹಬ್ಬ. ಭಾರತದಲ್ಲಿ ರೈತರು ತಾವು ಬೆಳೆದ ಬೆಳೆಗಳನ್ನು ದೇವರಿಗೆ ಅರ್ಪಿಸಿ, ಪೂಜೆ ಸಲ್ಲಿಸುವ ವಿಶಿಷ್ಟ ಹಬ್ಬ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ಸಿರಿಧಾನ್ಯ ಹಾಗೂ ಬೆಳೆಗಳ ರಾಶಿಗೆ ಪೂಜೆ ಸಲ್ಲಿಸುವ ಮೂಲಕ ಲಾಲ್‌ಬಾಗ್‌ನಲ್ಲಿ ಆಯೋಜಿಸಿದ್ದ ಸುಗ್ಗಿ-ಹುಗ್ಗಿ ಸಂಕ್ರಾಂತಿ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರದಿಂದ ಈ ಸುಗ್ಗಿ-ಹುಗ್ಗಿ ಕಾರ್ಯಕ್ರಮವನ್ನು ಆಚರಿಸುತ್ತಿದ್ದೇವೆ ಎಂದು ಹೇಳಿದರು.

ರೈತ ಮತ್ತು ಸಂಸ್ಕೃತಿ ಬೇರೆ ಬೇರೆ ಅಲ್ಲ. ಹೀಗಾಗಿ, ಈ ಬಾರಿ ವಿಶೇಷವಾಗಿ ಕೃಷಿ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇದರಿಂದ ಹಬ್ಬಕ್ಕೆ ಹೆಚ್ಚಿನ ಶೋಭೆ ತರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
    
ಆಧುನಿಕ ಜಗತ್ತಿನ ಮೊರೆ ಹೋಗುತ್ತಿರುವ ಇಂದಿನವರಿಗೆ ಪೂರ್ವಜರು ಅನುಸರಿಸಿಕೊಂಡು ಬಂದಿರುವ ಸಂಸ್ಕೃತಿ, ಆಚಾರ-ವಿಚಾರಗಳನ್ನು ತಿಳಿಯುವಂತಾಗಬೇಕು ಹಾಗೂ ಇಂದಿನ ಮಕ್ಕಳಿಗೆ ಹಬ್ಬದ ವಿಶೇಷತೆಗಳನ್ನು ತಿಳಿಸಿ ಅವರಲ್ಲಿ ನಮ್ಮತನದ ಭಾವನೆಗಳನ್ನು ಬೆಳೆಸಬೇಕೆಂದು ಹೇಳಿದರು. ಇಲ್ಲಿ ಆಯೋಜಿಸಿರುವ ಸುಗ್ಗಿ-ಹುಗ್ಗಿ ಸಂಕ್ರಾಂತಿ ಸಂಭ್ರಮಕ್ಕೆ ನಗರವಾಸಿಗಳು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಹಬ್ಬದ ವಾತಾವರಣದಲ್ಲಿ ಸಮಯ ಕಳೆಯಲು ಅವಕಾಶ ಮಾಡಿಕೊಡಬೇಕು. ಅಲ್ಲದೆ, ನಮ್ಮಂತಹ ಕಲಾವಿದರಿಗೆ ಧರ್ಮ, ಜಾತಿ ಬೇಧ ಎಂಬುದು ಇಲ್ಲ. ಅದೇ ರೀತಿ ರೈತರಲ್ಲೂ ಯಾವುದೆ ಬೇಧಭಾವ ಎಂಬುದು ಇಲ್ಲ ಎಂದು ಹೇಳಿದು.

ಕೃಷಿ ಸಚಿವ ಕೃಷ್ಣೇಭೈರೇಗೌಡ ಮಾತನಾಡಿ, ನಗರವಾಸಿಗಳಿಗೆ ನಮ್ಮ ಇತಿಹಾಸ- ಸಂಸ್ಕೃತಿ ಮತ್ತು ಕೃಷಿಯ ಬಗ್ಗೆ ಅರಿವಿಲ್ಲ. ಹೀಗಾಗಿ, ಈ ಸುಗ್ಗಿ-ಹುಗ್ಗಿ ಹಬ್ಬವು ಅವರಿಗೆ ಒಂದು ಉತ್ತಮ ಅವಕಾಶ. ಈ ಒಂದು ಜಾಗದಲ್ಲೇ ವಿವಿಧ ಪ್ರಾಂತ್ಯಗಳ ಹಬ್ಬದ ಸಂಸ್ಕೃತಿಯನ್ನು ಕಾಣುತ್ತಿರುವುದು ಮಹತ್ವದ ಸಂಗತಿಯಾಗಿದೆ. ಹಸುಗಳಿಗೆ ಶೃಂಗಾರ ಮಾಡಿ ಕಿಚ್ಚು ಹಾಯಿಸುವುದು, ಬೆಳೆಗಳ ರಾಶಿಗೆ ಪೂಜೆ ಮಾಡುವುದು ಹಬ್ಬ ಸಂಕೇತವಾಗಿದೆ ಎಂದು ತಿಳಿಸಿದರು.

ಹಳ್ಳಿಯ ಸಂಪರ್ಕ ಕಡಿತಗೊಂಡಿರುವವರು ಹಳ್ಳಿಯ ಸೊಬಗನ್ನು ನೆನೆಯಲು ಇದೊಂದು ಸುವರ್ಣಾವಕಾಶ. ಹೊಸ ಅನುಭವವನ್ನು ಈ ಹಬ್ಬ ನೀಡಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ದಲ್ಲಿ ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ವಿಶು ಕುಮಾರ್, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಭಾಗವಹಿಸಿದ್ದರು.

ಕಲೆಗಳ ಪ್ರದರ್ಶನ: ಸುಗ್ಗಿ-ಹುಗ್ಗಿಯ ಪ್ರಮುಖ ಆಕರ್ಷಣೆಯಾಗಿ ಜಾನಪದ ಕಲಾ ಜಗತ್ತು ಅನಾವರಣಗೊಂಡಿತು. ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿದ್ದ ಜಾನಪದ ಕಲಾವಿದರು ನಾನಾ ಪ್ರದರ್ಶನ ನೀಡಿದರು. ಕರುನಾಡಿನ ಪ್ರಮುಖ ಕಲಾಪ್ರಕಾಗಳಲ್ಲಿ ಪ್ರಸಿದ್ಧಿ ಪಡೆದಿರುವವವರು 250ಕ್ಕೂ ಹೆಚ್ಚು ಮಂದಿ ಪ್ರದರ್ಶನ ನೀಡಿದರು. ಸುಗ್ಗಿ ಹಾಡು, ಗೀಗೀ ಪದ ಹಾಗೂ ಚೌಡಿಕೆ ಪದಗಳನ್ನು ಹಾಡುವ ಕಲಾವಿದರು ಆಗಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News