×
Ad

ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹ: ಪೊಲೀಸರು- ದಸಂಸ ಕಾರ್ಯಕರ್ತರ ನಡುವೆ ವಾಗ್ವಾದ

Update: 2018-01-14 19:56 IST

ಬೆಂಗಳೂರು, ಜ. 14: ಪರಿಶಿಷ್ಟ ಜಾತಿಯ ಮೀಸಲಾತಿ ವರ್ಗೀಕರಣ ಸಂಬಂಧದ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು, ನಗರದ ವೌರ್ಯ ವೃತ್ತದಲ್ಲಿನ ಗಾಂಧಿ ಪುತ್ಥಳಿ ಬಳಿ ಧರಣಿ ಸತ್ಯಾಗ್ರಹ ನಡೆಸಿ, ಮುಖ್ಯಮಂತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರವಿವಾರ ದಸಂಸ ನೇತೃತ್ವದಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ಕಾರ್ಯಕರ್ತರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಮುದಾಯದ ಮುಖಂಡರ ಸಭೆ ನಡೆಸಿದ್ದು, ಸದಾಶಿವ ಆಯೋಗದ ವರದಿ ಜಾರಿಗೆ ತಮ್ಮ ತೀರ್ಮಾನ ಪ್ರಕಟಿಸಿಲ್ಲ ಎಂದು ಹೇಳಿದರು.

ಅಲ್ಲದೆ, ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾದ ಹಿನ್ನೆಲೆಯಲ್ಲಿ ದಸಂಸ ಕಾರ್ಯಕರ್ತರು ಹಾಗೂ ಪೊಲೀಸರು ಮಧ್ಯೆ ಸಂಘರ್ಷ ಏರ್ಪಟ್ಟಿತ್ತು. ಈ ವೇಳೆ ಕಾರ್ಯಕರ್ತರು, ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ಬೇಧಿಸಿದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಕೂಡಲೇ ಮಧ್ಯಪ್ರವೇಶಿಸಿ ಪೊಲೀಸ್ ಅಧಿಕಾರಿಗಳು ಕಾರ್ಯಕರ್ತರ ಮನವೋಲಿಸಿದರು.

ಸತ್ಯಾಗ್ರಹದ ನೇತೃತ್ವ ವಹಿಸಿದ್ದ ದಸಂಸ ರಾಜ್ಯಾಧ್ಯಕ್ಷ ಆರ್.ಮೋಹನ್‌ರಾಜ್ ಮಾತನಾಡಿ, ನ್ಯಾ.ಸದಾಶಿವ ಆಯೋಗದ ವರದಿ ಜಾರಿ ವಿಚಾರವಾಗಿ ಪರಿಶಿಷ್ಟರಲ್ಲೇ ಇದ್ದ ಭಿನ್ನಾಭಿಪ್ರಾಯ ಬಗೆಹರಿದಿದ್ದು, ವರದಿ ವೈಜ್ಞಾನಿಕವಾಗಿದೆ ಎಂಬುದು ಎಲ್ಲರಿಗೂ ಮನವರಿಕೆಯಾಗಿದೆ. ಆದುದರಿಂದ ರಾಜ್ಯ ಸರಕಾರ ಕೂಡಲೇ ವರದಿ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು ಆಗ್ರಹಿಸಿದರು.

ಪರಿಶಿಷ್ಟ ಜಾತಿಯಲ್ಲೆ ಮೀಸಲಾತಿ ವಂಚಿತ ಸಮುದಾಯಗಳಿಗೆ ಒಳಮೀಸಲಾತಿ ಕಲ್ಪಿಸುವ ಮೂಲಕ ಅನ್ಯಾಯವನ್ನು ಸರಿಪಡಿಸಬೇಕು. ಇದರಿಂದ ಸಮುದಾಯದ ಒಗ್ಗಟ್ಟು ಸಾಧ್ಯವಾಗಲಿದೆ. ಮಾತ್ರವಲ್ಲ, ಶಿಕ್ಷಣ-ಉದ್ಯೋಗದಲ್ಲಿ ಎಲ್ಲ ವರ್ಗಗಳಿಗೂ ಆದ್ಯತೆ ಸಿಗಲಿದೆ ಎಂದು ಅವರು ಪ್ರತಿಪಾದಿಸಿದರು.

ಬಳಿಕ ಸ್ಥಳಕ್ಕೆ ಸಮಾಜ ಕಲ್ಯಾಣ ಸಚಿವ ಆಂಜನೇಯ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ್ ಆಗಮಿಸಿ ಹೋರಾಟನಿರತರ ಮನವಿ ಸ್ವೀಕರಿಸಿದರು. ಅಲ್ಲದೆ, ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆ ಯಶಸ್ವಿಯಾಗಿದ್ದು, ನಾಳೆ ಸಂಘಟನೆಗಳ ಮುಖಂಡರ ಸಭೆ ನಡೆಸಲಿದ್ದಾರೆ. ಹೀಗಾಗಿ ಚಳವಳಿ ಹಿಂಪಡೆಯಿರಿ ಎಂದು ಮನವಿ ಮಾಡಿದರು. ಆದುದರಿಂದ ಧರಣಿ ಸತ್ಯಾಗ್ರಹವನ್ನು ಕೈಬಿಟ್ಟರು.

ಸತ್ಯಾಗ್ರಹದ ನೇತೃತ್ವವನ್ನು ದಸಂಸ ಮುಖಂಡರಾದ ಹೆಣ್ಣೂರು ಶ್ರೀನಿವಾಸ್, ಬಸವರಾಜ್ ಕವಿತಾಳ, ಕುಮಾರ್, ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಕೇಶವಮೂರ್ತಿ, ಭೀಮಜ್ಯೋತಿ ಸೇರಿದಂತೆ ಇನ್ನಿತರರು ವಹಿಸಿದ್ದರು.


‘ಪರಿಶಿಷ್ಟ ಜಾತಿ ಮೀಸಲಾತಿ ಹಂಚಿಕೆಯಲ್ಲಿನ ತಾರತಮ್ಯ ನಿವಾರಿಸಲು ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸಮುದಾಯ ತಕ್ಕ ಪಾಠ ಕಲಿಸಲಿದೆ’
-ಹೆಣ್ಣೂರು ಶ್ರೀನಿವಾಸ್ ದಸಂಸ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News