×
Ad

ಬೆಂಗಳೂರು: ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ ಮರಗಳ ಸ್ಥಳಾಂತರ

Update: 2018-01-14 20:02 IST

ಬೆಂಗಳೂರು, ಜ. 14: ನಮ್ಮ ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿ ಹಿನ್ನೆಲೆಯಲ್ಲಿ 108 ಮರಗಳನ್ನು ತೆರವುಗೊಳಿಸಲಾಗುತ್ತಿದ್ದು, ಈ ಮರಗಳನ್ನು ಬೊಮ್ಮನಹಳ್ಳಿಗೆ ಸ್ಥಳಾಂತರಿಸಿ ಪೋಷಿಸಲಾಗುವುದು ಎಂದು ಕೇಂದ್ರ ಸಚಿವ ಅನಂತಕುಮಾರ್ ತಿಳಿಸಿದ್ದಾರೆ.

ರವಿವಾರ ನಗರದ ಬಿಟಿಎಂ ಲೇಔಟ್‌ನ ನಾಲ್ಕನೇ ಹಂತದ ದೇವರ ಚಿಕ್ಕನಹಳ್ಳಿಯ ಪ್ರಾದೇಶಿಕ ಸಾರಿಗೆ ಕಚೇರಿ ಎದುರು ಅತಿದೊಡ್ಡ ಬೆಂಗಳೂರು ಒನ್ ಕೇಂದ್ರವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಗಿಡ ಮರ ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಹಸಿರು ವಾತಾವರಣ ನಿರ್ಮಿಸಿಸುವ ನಿಟ್ಟಿನಲ್ಲಿ ಅದಮ್ಯಚೇತನ ಸಂಸ್ಥೆ ನಗರದಲ್ಲಿ ಪ್ರತಿ ರವಿವಾರ ಹಸಿರು ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದ ಅವರು, ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ ತೆರವುಗೊಳಿಸಿದ್ದ ಮರಗಳನ್ನು ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ನೆಡಲಾಗುವುದು ಎಂದು ತಿಳಿಸಿದರು.

ಇಂದು ಹೊಸದಾಗಿ 180 ಸಸಿಗಳನ್ನು ನೆಡಲಾಗಿದೆ. ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಣೆ ಮಾಡಿ ಪರಿಸರಕ್ಕೆ ಮತ್ತು ಸಮಾಜಕ್ಕೆ ಕೊಡುಗೆ ನೀಡಬೇಕೆಂದು ಕರೆ ನೀಡಿದ ಅವರು, ಈಗಾಗಲೇ ಬಿಳೇಕಹಳ್ಳಿ ವಾರ್ಡಿನ ವಿವಿಧೆಡೆ 56 ಮರಗಳನ್ನು ನೆಡುವ ಕಾರ್ಯ ಆರಂಭವಾಗಿದೆ ಎಂದರು.

ಕೇಂದ್ರ ಸರಕಾರ ಜನರ ಕೈಗೆಟುಕುವದರದಲ್ಲಿ ಜನರಿಕ್ ಔಷಧಿಗಳು ಒದಗಿಸುವ ನಿಟ್ಟಿನಲ್ಲಿ ಅಗತ್ಯವಿರುವಲ್ಲಿ ಜನೌಷಧಿ ಕೇಂದ್ರಗಳನ್ನು ಆರಂಭಿಸುತ್ತಿದೆ. ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಅನಂತಕುಮಾರ್ ತಿಳಿಸಿದರು.

ಬೊಮ್ಮನಹಳ್ಳಿ ಶಾಸಕ ಸತೀಶ್‌ರೆಡ್ಡಿ ಮಾತನಾಡಿ, ನಗರದಲ್ಲಿ ಅತಿ ದೊಡ್ಡ ಬೆಂಗಳೂರು ಒನ್ ಕೇಂದ್ರ ಆರಂಭಿಸಲಾಗಿದೆ. ಕ್ಷೇತ್ರದ 9 ವಾರ್ಡ್‌ಗಳಲ್ಲಿ ಜನೌಷಧಿ ಕೇಂದ್ರಗಳನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದರು.

ಬಿಬಿಎಂಪಿ ಸದಸ್ಯ ರಾಮಮೋಹನ್ ರಾಜು ಮಾತನಾಡಿ, ಬೊಮ್ಮನಹಳ್ಳಿ ಕ್ಷೇತ್ರ ಹಲವು ವೈಶಿಷ್ಟ್ಯತೆಗಳನ್ನು ಹೊಂದಿದೆ. ಇದೀಗ ಅತಿದೊಡ್ಡ ಬೆಂಗಳೂರು ಒನ್ ಕೇಂದ್ರ ಸೇರ್ಪಡೆಗೊಂಡಿದೆ ಎಂದು ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರದ ಮುಖಂಡರು, ನಾಗರಿಕರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News