ಬಡವರ ಸಮಸ್ಯೆ ಚುನಾವಣೆಯಷ್ಟೆ ಮುಖ್ಯ: ಎಚ್.ಎಸ್.ದೊರೆಸ್ವಾಮಿ
ಬೆಂಗಳೂರು, ಜ. 15: ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಚುನಾವಣೆ ಎಷ್ಟು ಮುಖ್ಯವೋ ಬಡವರ ಸಮಸ್ಯೆಗೆ ಪರಿಹಾರ ನೀಡುವುದು ಅಷ್ಟೆ ಮುಖ್ಯ. ಹೀಗಾಗಿ ಕೂಡಲೇ ಭೂಮಿ ಮತ್ತು ವಸತಿ ವಂಚಿತರ ಸಭೆ ಕರೆದು, ಸಮಿತಿ ರಚಿಸಿ ಸಮಸ್ಯೆ ಬಗೆಹರಿಸಬೇಕೆಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಒತ್ತಾಯಿಸಿದ್ದಾರೆ.
ಸೋಮವಾರ ನಗರದ ಗಾಂಧಿ ಭವನದ ಸಮೀಪ ‘ಭೂಮಿ-ವಸತಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಂತೆ ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯಾಂಧ್ಯಂತ ಬಡಜನರ ಭೂಮಿ-ವಸತಿ, ಸಮಸ್ಯೆ ಪರಿಹಾರಕ್ಕಾಗಿ ಕಳೆದ 18 ತಿಂಗಳಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದರೂ ಸಹ ಸಮಸ್ಯೆಗೆ ಪರಿಹಾರ ದೊರಕಿಲ್ಲ. ಮುಖ್ಯಮಂತ್ರಿಗಳಿಗೆ ಚುನಾವಣೆಯಷ್ಟೆ ಜನರ ಸಮಸ್ಯೆಯೂ ಮುಖ್ಯವೆಂಬುದನ್ನು ಅರಿತು, ಸಭೆ ಕರೆದು ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಹೋರಾಟಗಾರರನ್ನೊಳಗೊಂಡ ಸಮಿತಿ ರಚಿಸಿ ಸಮಸ್ಯೆ ಪರಿಹರಿಸಲು ಮುಂದಾಗಬೇಕೆ ಎಂದರು.
ಸರಕಾರ ಭೂಮಿ-ವಸತಿ ವಂಚಿತರಿಗೆ 2ಎಕರೆ ಭೂಮಿ ನೀಡುವುದಾಗಿ ಭರವಸೆ ನೀಡಿತ್ತು. ಅದರಂತೆ, ಪ್ರತಿ ಜಿಲ್ಲೆಗಳಲ್ಲಿ ಎರಡು ತಾಲೂಕುಗಳನ್ನು ಆಯ್ಕೆ ಮಾಡಿಕೊಂಡು ಎರಡು ತಿಂಗಳೊಳಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು. ನಂತರ ಲಾಟರಿ ಮೂಲಕ ಜಮೀನು ಹಂಚಿಕೆ ಮಾಡಬೇಕು ಎಂದು ಹೇಳಿದರು.
ಕಂದಾಯ ಮಂತ್ರಿಗಳು ಸಭೆಗಳಲ್ಲಿ ಅಕ್ರಮ-ಸಕ್ರಮ ಮಾಡುತ್ತೇವೆಂದು ಹೇಳುತ್ತಾ ಬಂದಿದ್ದರು. ಆದರೆ ಇತ್ತಿಚೀಗೆ ಶಾಸಕರು ತಮ್ಮ ಮಾತು ಕೇಳುತ್ತಿಲ್ಲ ಎಂಬ ಹತಾಶ ನುಡಿಗಳನ್ನಾಡುತ್ತಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.
ಸಚಿವಾಲಯದಿಂದ ಕಚೇರಿಗಳಿಗೆ ಸುತ್ತೋಲೆ ಹೋಗುತ್ತಿದೆ. ಶಾಸಕರ ನಿರ್ಲಕ್ಷ ಧೋರಣೆಯಿಂದಾಗಿ ಸಭೆಗಳೆ ನಡೆದಿಲ್ಲ. ಹೀಗಾಗಿ, ಶನಿವಾರ ತಾಲೂಕು ದಂಡಾಧಿಕಾರಿಗಳ ಕಚೇರಿಗೆ ತೆರಳಿ ಸಭೆನಡೆಸಿರುವ ಬಗ್ಗೆ ಪರಿಶೀಲನೆ ನಡೆಸಲು ತೀರ್ಮಾನಿಸಲಾಗಿದೆ. ಒಂದು ವೇಳೆ ಸಭೆ ನಡೆಸಿಲ್ಲವೆಂದರೆ ಶಾಸಕರ ಮನೆ ಮುಂದೆ ಧರಣಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಸರಕಾರಕ್ಕೆ ಬಡವರ ಪರ ಕಾಳಜಿ ಇದ್ದರೆ ಕೂಡಲೇ ಸಭೆ ಕರೆದು, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಸಮಸ್ಯೆಗಳಿಗೆ ಸಮಗ್ರ ಪರಿಹಾರ ಒದಗಿಸಬೇಕು. ಇಲ್ಲವಾದರೆ ಎಲ್ಲಾ ತಾಲೂಕು ಕೇಂದ್ರಗಳಲ್ಲೂ ಧರಣಿ ಹಮ್ಮಿಕೊಳ್ಳಲಾಗುವುದೆಂದು ದೊರೆಸ್ವಾಮಿ ಎಚ್ಚರಿಸಿದರು.
ಹಿರಿಯ ಪರ್ತಕರ್ತೆ ಡಾ.ವಿಜಯಮ್ಮ ಮಾತನಾಡಿ, ತಮ್ಮ ಹಕ್ಕು ಕೇಳುತ್ತಿರುವ ಬಡಜನತೆಗೆ ಸಂವಿಧಾನಿಕವಾದ ಹಕ್ಕು ಸಿಗಬೇಕು. ಸರಕಾರಗಳು ಬಂಡವಾಳಶಾಹಿಗಳ ಕೈಗೊಂಬೆಯಾಗಿ ವರ್ತಿಸುವುದನ್ನು ಬಿಟ್ಟು ದುಡಿಯುವ ಕೈಗಳಿಗೆ ಭೂಮಿ ನೀಡಬೇಕು ಎಂದರು.
ಧರಣಿಯಲ್ಲಿ ಮಾನವ ಹಕ್ಕು ಹೋರಾಟಗಾರ ಪ್ರೊ.ನಗರಿ ಬಾಬಯ್ಯ, ಕರ್ನಾಟಕ ಹಳ್ಳಿ ಮಕ್ಕಳ ಸಂಘದ ಬಾಬು, ಸಾರ್ವಜನಿಕ ಉದ್ಯಮ, ಕನ್ನಡ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶ್ರಿಧರ್ ಸೇರಿದಂತೆ ಇನ್ನಿತರರಿದ್ದರು.
ಶಾಸಕರು, ವಿರೋಧ ಪಕ್ಷದ ನಾಯಕರು ಬಡವರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಕೂಡಲೆ ಸಭೆ ಕರೆದು ಸಮಸ್ಯೆ ಬಗೆಹರಿಸುವಂತೆ ಸರಕಾರಕ್ಕೆ ಒತ್ತಡ ಹಾಕಬೇಕು.
-ರವಿಕೃಷ್ಣಾರೆಡ್ಡಿ, ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ