ಇನ್ಸ್‌ಪೆಕ್ಟರ್ ಪತ್ನಿಯ ಚಿನ್ನದ ಸರ ಕಳವು
ಬೆಂಗಳೂರು,ಜ.15: ಸಂಕ್ರಾಂತಿಯ ದಿನವೇ ಸರಗಳ್ಳರು ಇನ್ಸ್‌ಪೆಕ್ಟರ್‌ವೊಬ್ಬರ ಪತ್ನಿಯ ಸರವನ್ನೇ ಕಸಿದು ಪರಾರಿಯಾಗಿರುವ ಘಟನೆ ನಗರದ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಎಚ್‌ಎಂಟಿ ಬಡಾವಣೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಕೆಂಚೇಗೌಡ ಅವರ ಪತ್ನಿ ಗಂಗಮ್ಮರಿಂದ ಮಾಂಗಲ್ಯ ಸರ ಕದ್ದು ಸರಗಳ್ಳರು ಪರಾರಿಯಾಗಿದ್ದಾರೆ.
ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಇನ್ಸ್‌ಪೆಕ್ಟರ್ ಆಗಿರುವ ಕೆಂಚೇಗೌಡ ಅವರ ಪತ್ನಿ ಮನೆ ಮುಂದೆ ನೀರು ಹಾಕುತ್ತಿದ್ದಾಗ ಬಂದ ಸರಗಳ್ಳರು, ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ. ಗಂಗಮ್ಮ ಎಷ್ಟೇ ಪ್ರತಿರೋಧ ಒಡ್ಡಿದರೂ ಆಕೆಯನ್ನು ಕೆಳಗೆ ದೂಡಿ ಚಿನ್ನದ ಸರ ಕದ್ದು ಪರಾರಿಯಾಗಿದ್ದಾರೆ.
ಈ ವೇಳೆ ಇನ್ಸ್‌ಪೆಕ್ಟರ್ ಕೆಂಚೇಗೌಡ ಸುಮಾರು ಒಂದು ಕಿಲೋಮೀಟರ್‌ವರೆಗೆ ಕಳ್ಳರನ್ನು ಬೆನ್ನತ್ತಿ ಹಿಡಿಯಲು ವಿಫಲ ಯತ್ನ ನಡೆಸಿದ್ದಾರೆ. ಈ ಸರಗಳ್ಳತನದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಪೀಣ್ಯ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಇರಾನಿ ಗ್ಯಾಂಗ್‌ನವರು ಸರ ಕದ್ದಿದ್ದಾರೆ ಎನ್ನಲಾಗಿದೆ.