ಪಾಕಿಸ್ತಾನ: ಆತ್ಮಹತ್ಯಾ ಬಾಂಬ್ ದಾಳಿಗಳ ವಿರುದ್ಧ 1,800 ಮುಸ್ಲಿಂ ಧರ್ಮಗುರುಗಳ ಫತ್ವಾ

Update: 2018-01-16 08:47 GMT

ಇಸ್ಲಾಮಾಬಾದ್, ಜ.16: ಪಾಕಿಸ್ತಾನದ 1,800ಕ್ಕೂ ಅಧಿಕ ಮುಸ್ಲಿಂ ಧರ್ಮಗುರುಗಳು ಆತ್ಮಹತ್ಯಾ  ಬಾಂಬ್ ದಾಳಿಗಳ ವಿರುದ್ಧ ಫತ್ವಾ  ಹೊರಡಿಸಿದ್ದಾರೆ ಎಂದು ಸರಕಾರ ಇಂದು ಬಿಡುಗಡೆಗೊಳಿಸಲಿರುವ ಪುಸ್ತಕವೊಂದರಲ್ಲಿ  ತಿಳಿಸಲಾಗಿದೆ. ಸರಕಾರದ ಸುಪರ್ದಿಯಲ್ಲಿರುವ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಯುನಿವರ್ಸಿಟಿ ಈ ಕೃತಿಯನ್ನು ಹೊರತಂದಿದೆ.

ದೇಶದಲ್ಲಿ ನಡೆಯುವ ಆತ್ಮಹತ್ಯಾ ಬಾಂಬ್ ದಾಳಿಗಳು ‘ನಿಷೇಧಿತ’ ಅಥವಾ `ಹರಾಮ್' ಎಂದೂ ಮುಸ್ಲಿಂ ಧಾರ್ಮಿಕ ನಾಯಕರು ಹೇಳಿದ್ದಾರಲ್ಲದೆ 2000ದ ಆರಂಭದಿಂದ ಸಾವಿರಾರು ಜನರನ್ನು ಬಲಿ ಪಡೆದಿರುವ ಉಗ್ರವಾದವನ್ನು ಮಟ್ಟ ಹಾಕಬೇಕೆಂದೂ ಆಗ್ರಹಿಸಿದ್ದಾರೆ.

“ಸುಧಾರಣವಾದಿ ಇಸ್ಲಾಮಿಕ್ ಸಮಾಜದ ಸ್ಥಿರತೆಗಾಗಿ ಈ ಫತ್ವಾ ಒಂದು ಬಲಿಷ್ಠ  ತಳಹದಿಯನ್ನು ಒದಗಿಸುವುದು'' ಎಂದು ಪಾಕಿಸ್ತಾನ ಅಧ್ಯಕ್ಷ ಮಮ್ನೂನ್ ಹುಸೈನ್ ಈ ಕೃತಿಯಲ್ಲಿ ಬರೆದಿದ್ದಾರೆ.

``ಈ ಫತ್ವಾದಿಂದ ನಾವು ಮಾರ್ಗದರ್ಶನ ಪಡೆದು ಇಸ್ಲಾಮ್ ಧರ್ಮದ ತತ್ವಗಳಂತೆ ಉಗ್ರವಾದವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಷ್ಟ್ರಮಟ್ಟದಲ್ಲಿ ಜನಾಭಿಪ್ರಾಯ ಸೃಷ್ಟಿಸಬಹುದು'' ಎಂದೂ ಮಮ್ನೂನ್ ಹೇಳಿದ್ದಾರೆ.

``ಯಾವುದೇ ವ್ಯಕ್ತಿ, ಗುಂಪು ಯಾ ಅಧಿಕಾರಸ್ಥರು ಜಿಹಾದ್ ಘೋಷಿಸಲು ಯಾ ನಡೆಸಲು ಅಧಿಕಾರ ಹೊಂದಿಲ್ಲ ಹಾಗೂ ಆತ್ಮಹತ್ಯಾ ಬಾಂಬ್ ದಾಳಿಗಳು ಇಸ್ಲಾಮಿಕ್ ತತ್ವದ ವಿರುದ್ಧವಾಗಿದೆ'' ಎಂದೂ ಧಾರ್ಮಿಕ ನಾಯಕರು ಹೇಳಿದ್ದಾರೆ. ಈ ಕೃತಿ ಬಿಡುಗಡೆ ಸಮಾರಂಭದಲ್ಲಿ ಇಂದು ಪಾಕ್ ಅಧ್ಯಕ್ಷರು ಭಾಗವಹಿಸಲಿದ್ದಾರೆ.

ಆತ್ಮಹತ್ಯಾ ದಾಳಿಗಳನ್ನು, ಬಾಂಬ್ ದಾಳಿಗಳನ್ನು ಅನೈತಿಕ ಹಾಗೂ  ಮತಾಂಧ ಕೃತ್ಯಗಳಾಗಿದ್ದರೂ ಉಗ್ರರು ಇದನ್ನೇ ತಮ್ಮ ಪ್ರಮುಖ ಮತ್ತು ಪರಿಣಾಮಕಾರಿ ಅಸ್ತ್ರವಾಗಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News