ಸರಕಾರ ಉನ್ನತ ಮಟ್ಟದ ಸಭೆ ಕರೆಯುವವರೆಗೆ ನಿರಂತರ ಹೋರಾಟ: ನೂರ್ ಶ್ರೀಧರ್

Update: 2018-01-16 13:18 GMT

ಬೆಂಗಳೂರು, ಜ.16: ರಾಜ್ಯದಲ್ಲಿರುವ ಭೂ ಹೀನ ಕುಟುಂಬಗಳಿಗೆ ಸರಕಾರಿ ಭೂಮಿಯನ್ನು ಹಂಚಿಕೆ ಮಾಡುವ ಸಂಬಂಧ ಸರಕಾರ ಉನ್ನತ ಮಟ್ಟದ ಸಭೆ ಕರೆಯುವವರೆಗೆ ಧರಣಿಯನ್ನು ವಾಪಸ್ ಪಡೆಯುವುದಿಲ್ಲವೆಂದು ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿ ತಿಳಿಸಿದೆ.

ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ನೇತೃತ್ವದಲ್ಲಿ ನಗರದ ವಲ್ಲಭ ನಿಕೇತನ ಆಶ್ರಮದಲ್ಲಿ ನಡೆಯುತ್ತಿರುವ ಸತ್ಯಾಗ್ರಹ ಇಂದಿಗೆ ಏಳನೆ ದಿನಕ್ಕೆ ಕಾಲಿಟ್ಟಿದೆ. ಸರಕಾರ ಉನ್ನತ ಮಟ್ಟದ ಸಭೆ ಕರೆದು ಲಿಖಿತ ರೂಪದಲ್ಲಿ ಸೂಕ್ತ ಭರವಸೆ ನೀಡುವವರೆಗೆ ಯಾವುದೇ ಕಾರಣಕ್ಕೂ ಧರಣಿಯನ್ನು ವಾಪಸ್ ಪಡೆಯುವುದಿಲ್ಲ ಎಂದು ಹೋರಾಟದ ಸಂಚಾಲಕ ನೂರ್ ಶ್ರೀಧರ್ ತಿಳಿಸಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 18 ತಿಂಗಳಿನಿಂದ ಭೂ ಹೀನ ರೈತರಿಗೆ ಭೂಮಿ ಕೊಡಿ ಎಂದು ನಿರಂತರವಾಗಿ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಆದರೂ ಸರಕಾರ ಬಡ ರೈತರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕತೆ ತೋರಿಸುತ್ತಿಲ್ಲ. ಹೀಗಾಗಿ ನಮ್ಮ ಹೋರಾಟ ನಿರಂತರವಾಗಿದೆ ಎಂದು ಸ್ಪಷ್ಟಪಡಿಸಿದರು.

2016 ಆಗಸ್ಟ್‌ನಲ್ಲಿ ಬಡವರಿಗೆ ಭೂಮಿ ಹಂಚಿಕೆ ಮಾಡಿ ಎಂದು ಸುಮಾರು 10 ಸಾವಿರ ಮಂದಿ ನಗರದ ರೈಲ್ವೆ ಸ್ಟೇಷನ್‌ನಿಂದ ವಿಧಾನಸೌಧದವರೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದ್ದೆವು. ಈ ವೇಳೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೋರಾಟದ ಸ್ಥಳಕ್ಕೆ ಬಂದು, ನಮ್ಮ ಹೋರಾಟವನ್ನು ಮೆಚ್ಚಿ, ಎಲ್ಲ ಬಡವರಿಗೂ ಭೂಮಿ ಹಂಚಿಕೆ ಮಾಡುವುದರ ಕುರಿತು ಶೀಘ್ರವೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಆದರೆ, ಅವರ ಮಾತು ಕೇವಲ ಭರವಸೆಯಾಗಿಯೇ ಉಳಿಯಿತು ಎಂದು ಅವರು ವಿಷಾದಿಸಿದರು.

ನಂತರ 2016 ನವೆಂಬರ್‌ನಲ್ಲಿ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಮತ್ತೊಮ್ಮೆ ಧರಣಿ ಕುಳಿತೆವು. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಗೋಡು ತಿಮ್ಮಪ್ಪ, ಕಾನೂನು ಸಚಿವ ಜಯಚಂದ್ರ ನಮ್ಮ ಜೊತೆ ಸಭೆ ನಡೆಸಿ, ಸರಕಾರಿ ಭೂಮಿಯನ್ನು ಸರ್ವೆ ನಡೆಸಿ ಇರುವ ಭೂಮಿಯನ್ನು ಸಮಾನವಾಗಿ ಹಂಚಿಕೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಆದರೆ, ಕಾರ್ಯರೂಪಕ್ಕೆ ಮಾತ್ರ ಬಂದಿಲ್ಲವೆಂದು ಅವರು ಹೇಳಿದರು.

ಸರಕಾರದ ಎಲ್ಲ ಭರವಸೆಗಳು ವಿಫಲವಾಗಿರುವ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಧರಣಿನ್ನು ನಡೆಸಲಾಗುತ್ತಿದೆ. ಈ ಬಾರಿ ಕೇವಲ ಬಾಯಿ ಮಾತಿನಲ್ಲಿ ಭರವಸೆ ನೀಡಿದರೆ ಒಪ್ಪಿಕೊಳ್ಳಲಾಗುವುದಿಲ್ಲ. ಭೂ ಹೀನ ರೈತರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ ಕಾಲಮಿತಿಯಲ್ಲಿ ನಮ್ಮ ಭರವಸೆ ಈಡೇರಿಸುತ್ತೇವೆಂದು ಲಿಖಿತ ಭರವಸೆ ನೀಡುವವರೆಗೆ ನಾನು ಹೋರಾಟವನ್ನು ನಿಲ್ಲಿಸುವುದಿಲ್ಲವೆಂದು ಅವರು ಖಚಿತ ಪಡಿಸಿದರು.

ಧರಣಿಯಲ್ಲಿ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಸಿರಿಮನೆ ನಾಗರಾಜ್, ಕುಮಾರ್ ಸಮತಳ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

ನಾವು ರಾಜ್ಯದಲ್ಲಿರುವ ಎಲ್ಲಾ ಭೂ ಹೀನರಿಗೆ ತಲಾ 5 ಎಕರೆ ಕೊಡಬೇಕೆಂದು ಪಟ್ಟು ಹಿಡಿದಿಲ್ಲ. ಮೊದಲು ರಾಜ್ಯದಲ್ಲಿ ಖಾಲಿ ಇರುವ ಸರಕಾರಿ ಭೂಮಿಯನ್ನು ಸರ್ವೆ ನಡೆಸಿ, ಇರುವ ಭೂಮಿಯನ್ನು ಸಮಾನವಾಗಿ ಹಂಚಿಕೆ ಮಾಡಲಿ. ಅದು ಎರಡು ಎಕರೆ ಬಂದರೂ ಸರಿಯೆ, ಮೂರು ಎಕರೆ ಬಂದರು ಸರಿಯೇ. ಒಟ್ಟಾರೆ ರಾಜ್ಯದ ರೈತರು ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗುವಷ್ಟು ಭೂಮಿ ಸಿಗಬೇಕೆಂಬುದು ನಮ್ಮ ಹೋರಾಟದ ಆಶಯವಾಗಿದೆ.
-ನೂರ್ ಶ್ರೀಧರ್, ಹೋರಾಟಗಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News