×
Ad

ಸದಾಶಿವ ಆಯೋಗದ ವರದಿಗೆ ಶಿಫಾರಸ್ಸು ಮಾಡದಿದ್ದಲ್ಲಿ ಹೋರಾಟದ ಎಚ್ಚರಿಕೆ

Update: 2018-01-16 19:17 IST

ಬೆಂಗಳೂರು, ಜ.16: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು 10 ದಿನದೊಳಗೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡದಿದ್ದಲ್ಲಿ ರಾಜ್ಯಾದ್ಯಂತ ರಾಜ್ಯ ಸರಕಾರದ ವಿರುದ್ಧ ಹೋರಾಟ ನಡೆಸುವುದಾಗಿ ಕರ್ನಾಟಕ ರಾಜ್ಯ ದಲಿತ ಸಂಘಟನೆಗಳ ಒಕ್ಕೂಟ, ಛಲವಾದಿ ಮಹಾಸಭಾ ನ್ಯಾ.ಎ.ಜೆ.ಸದಾಶಿವ ಆಯೋಗ ಜಾರಿ ಹೋರಾಟ ಸಮಿತಿ-ಕರ್ನಾಟಕ ಎಚ್ಚರಿಕೆ ನೀಡಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನ್ಯಾ.ಸದಾಶಿವ ವರದಿ ಆಯೋಗ ಜಾರಿ ಸಮಿತಿ ಮಹಾ ಪ್ರಧಾನ ಕಾರ್ಯದರ್ಶಿ ಮಾರಸಂದ್ರ ಮುನಿಯಪ್ಪ, ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕಾಯಿದೆ ಜಾರಿಗೊಳಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು ಜ.15ರಂದು ಮುಖ್ಯಮಂತ್ರಿಗಳ ಜತೆ ಒಕ್ಕೂಟದ ಮುಖಂಡರು ಸಭೆ ನಡೆಸಲಾಯಿತು. ಸಭೆಯಲ್ಲಿ ಒಳ ಮೀಸಲಾತಿ ಕಾಯಿದೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮತಿ ಸೂಚಿಸಿದ್ದು, ಕಾನೂನು ಸಲಹೆ ಪಡೆದು ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ.

ಮಾದಿಗ ಚಲವಾದಿ ಸಮುದಾಯಕ್ಕೆ ಸದಾಶಿವ ಆಯೋಗದಲ್ಲಿ ಶೇ.11 ರಷ್ಟು ಮೀಸಲಾತಿ ನಿಗದಿಪಡಿಸಿದೆ. ಎರಡು ಸಮುದಾಯಕ್ಕೂ ಶೇ.5.5 ಭಾಗದಲ್ಲಿ ಮೀಸಲಾತಿ ನೀಡುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದೇವೆ ಎಂದು ತಿಳಿಸಿದರು.

ಪರಿಶಿಷ್ಟಜಾತಿ, ಅಲೆಮಾರಿ ಸಮುದಾಯಕ್ಕೆ ಶೇ 1.ಭಾಗ ಮೀಸಲಾತಿ ನಿಗದಿಪಡಿಸಿದ್ದು, ಇದಕ್ಕೆ ಸಮುದಾಯದ ಜನ ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ, ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ 10 ದಿನದೊಳಗಾಗಿ ವರದಿ ಜಾರಿಗಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಮಾರಸಂದ್ರ ಮುನಿಯಪ್ಪ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನ್ಯಾ.ಎ.ಜೆ.ಸದಾಶಿವ ಆಯೋಗ ಜಾರಿ ಹೋರಾಟ ಸಮಿತಿ-ಕರ್ನಾಟಕದ ರಾಜ್ಯ ಉಪಾಧ್ಯಕ್ಷರಾದ ಎನ್.ಮೂರ್ತಿ, ಸಿದ್ಧರಾಜು, ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷ ಹೆಚ್.ಪಿ.ಕುಮಾರ್, ರಾಜ್ಯ ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಯೋಜಕ ಎನ್.ಮುನಿಸ್ವಾಮಿ, ರಾಜ್ಯ ಸಹ ಸಂಯೋಜಕ ಸಿ.ಎಂ.ಮುನಿಯಪ್ಪ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News