ದಲಿತ ಸಂಘರ್ಷ ಸಮಿತಿಯಿಂದ ಜ.18ರಂದು ಬೃಹತ್ ಪ್ರತಿಭಟನೆ

Update: 2018-01-16 13:50 GMT

ಬೆಂಗಳೂರು, ಜ.16: ಸರಕಾರ ಭೂಮಿ, ವಸತಿ ರಹಿತರಿಗೆ ವ್ಯವಸಾಯ ಮಾಡಲು ಭೂಮಿ, ವಾಸಿಸಲು ವಸತಿ ಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜ.18ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಯೋಜಕ ಯಮರೆ ಶಂಕರ್ ಮಾತನಾಡಿ, ಬಂಡವಾಳ ಶಾಹಿಗಳು, ಕಾರ್ಪೊರೇಟ್ ಕಂಪೆನಿಗಳು, ಬಡವರ ಜಮೀನನ್ನು ಆಕ್ರಮಿಸಿಕೊಂಡು ನಿರಂತರವಾಗಿ ದೌರ್ಜನ್ಯವೆಸಗುತ್ತಾ ಬಂದಿವೆ ಎಂದು ಆರೋಪಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಬಳಿಯ ಉಲ್ಲಾಳು ಗ್ರಾಮದಲ್ಲಿ 30 ವರ್ಷಗಳಿಂದ ವಾಸಿಸುತ್ತಿರುವ ಜನರಿಗೆ ಸರಕಾರ ಹಕ್ಕು ಪತ್ರ ವಿತರಿಸಬೇಕು. ಉತ್ತನಹಳ್ಳಿ ಸರ್ವೆ ನಂ.23 ಹಾಗೂ 73ರಲ್ಲಿ ನಿವೇಶನ ಮಾಡಿ, ಬಡವರಿಗೆ ಹಂಚಬೇಕು. ಜತೆಗೆ ನಗರದ ಎಂ.ಎಸ್.ಪಾಳ್ಯದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಬೇಕೆಂದರು.

ಎಲ್ಲ ತಾಲೂಕು ಕಚೇರಿ ಮುಂದೆ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಬೇಕು. ಬಡವರಿಗೆ ಅಕ್ರಮ-ಸಕ್ರಮ ಯೋಜನೆಯಡಿಯಲ್ಲಿ ಹಕ್ಕು ಪತ್ರ ವಿತರಿಸುವುದು ಸೇರಿ 10 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದ ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ಬೃಹತ್ ರ್ಯಾಲಿ ನಡೆಸಿ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಯಮರೆ ಶಂಕರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಮನಗರ ಜಿಲ್ಲಾ ಸಂಯೋಜಕ ನಾಗೇಂದ್ರ, ಕೋಲಾರ ಜಿಲ್ಲಾ ಸಂಯೋಜಕ ಎಂ.ನಾಗರಾಜ್, ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News