×
Ad

ಬೂತ್ ಸಮಿತಿ ಸದಸ್ಯರು ಎಚ್ಚರಿಕೆ ವಹಿಸಬೇಕು: ಸಿದ್ದರಾಮಯ್ಯ

Update: 2018-01-16 20:36 IST

ಬೆಂಗಳೂರು, ಜ.16: ಕರ್ನಾಟಕ ಹೊರತುಪಡಿಸಿದರೆ ದೇಶದ ಬೇರೆ ಯಾವ ರಾಜ್ಯದಲ್ಲಿಯೂ ಈಗ ಚುನಾವಣೆ ಇಲ್ಲ. ಹೀಗಾಗಿ ಬೇರೆ ರಾಜ್ಯದ ಆರೆಸೆಸ್ಸ್ ಕಾರ್ಯಕರ್ತರನ್ನು ಕರೆ ತಂದು ಇಲ್ಲಿನ ಮತದಾರರ ಪಟ್ಟಿಗೆ ಅವರ ಹೆಸರನ್ನು ಸೇರಿಸಿರುತ್ತಾರೆ. ಈ ಬಗ್ಗೆ ಬೂತ್ ಸಮಿತಿ ಕಾರ್ಯಕರ್ತರು ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದ ಸರ್ದಾರ್ ಪಟೇಲ್ ಭವನದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಕೆಪಿಸಿಸಿಗೆ ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಪ್ರತಿ ಬೂತ್‌ನಲ್ಲಿ 50 ಮತಗಳನ್ನು ಹೆಚ್ಚಿಸಿದರೆ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 10 ಸಾವಿರ ಮತಗಳನ್ನು ಹೆಚ್ಚಿಸಿದಂತಾಗುತ್ತದೆ. ಈ ಸಂಬಂಧ ಬೂತ್ ಸಮಿತಿ ಕಾರ್ಯಕರ್ತರಿಗೆ ಕಡ್ಡಾಯವಾಗಿ ಕಾರ್ಯಾಗಾರವನ್ನು ಮಾಡುವ ಅಗತ್ಯವಿದೆ. ನಮ್ಮ ಪಕ್ಷವು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರೆ ನಮ್ಮನ್ನು ಸೋಲಿಸುವವರು ಯಾರೂ ಇರುವುದಿಲ್ಲ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯವರು ಯಡಿಯೂರಪ್ಪರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದರೂ, ಅವರು ಯಡಿಯೂರಪ್ಪರನ್ನು ನಂಬಿಕೊಂಡಿಲ್ಲ. ಪ್ರಧಾನಿ ನರೇಂದ್ರಮೋದಿ ಯನ್ನು ನಂಬಿಕೊಂಡು ಚುನಾವಣೆಗೆ ಹೋಗುತ್ತಿದ್ದಾರೆ. ಯಡಿಯೂರಪ್ಪ ನನ್ನ ವಿರುದ್ಧ ಅದು ಬಿಡುತ್ತೇನೆ, ಇದು ಬಿಡುತ್ತೇನೆ ಎಂದು ಖಾಲಿ ಬುಟ್ಟಿ ಇಟ್ಟುಕೊಂಡು ತಿರುಗುತ್ತಿದ್ದಾರೆ ಎಂದು ಮುಖ್ಯಮಂತ್ರಿ ವ್ಯಂಗ್ಯವಾಡಿದರು.

ನರೇಂದ್ರ ಮೋದಿಗೆ ಬೆಂಕಿ ಹಚ್ಚೋದು ಬಿಟ್ಟರೆ ಬೇರೆ ಏನು ಗೊತ್ತಿಲ್ಲ. ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ, ‘ಸಿದ್ದರಾಮಯ್ಯನವರಿಗೆ ತಪರಾಕಿ ಸಾಕಾ ಇಲ್ಲ ಇನ್ನೂ ಬೇಕಾ, ಮುಂದೈತೆ ಮಾರಿ ಹಬ್ಬ’ ಎಂದಿದ್ದರು. ಇವರ ಗುಪ್ತ ಕಾರ್ಯಸೂಚಿ ಬೇರೆಯೇ ಇದೆ ಎಂದು ಸಿದ್ದರಾಮಯ್ಯ ಹೇಳಿದರು.

ಜವಾಬ್ದಾರಿಯುತ ಸ್ಥಾನದಲ್ಲಿರುವ ಕೇಂದ್ರ ಸಚಿವ ಇಂತಹ ಹೇಳಿಕೆ ನೀಡಿದರೂ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ನರೇಂದ್ರಮೋದಿ ಅದನ್ನು ಖಂಡಿಸಿಲ್ಲ. ಪಕ್ಷದ ಮುಖಂಡರ ಗಮನಕ್ಕೆ ತಾರದೆ ಅನಂತಕುಮಾರ್ ಇಂತಹ ಹೇಳಿಕೆಯನ್ನು ನೀಡಲು ಸಾಧ್ಯವಿಲ್ಲ. ಇಂತಹ ಬೆಳವಣಿಗೆಗಳಿಗೆ ತಕ್ಕ ಪ್ರತ್ಯುತ್ತರವನ್ನು ನಮ್ಮ ಪದಾಧಿಕಾರಿಗಳು ನೀಡಬೇಕು ಎಂದು ಅವರು ತಿಳಿಸಿದರು.

ರಾಜ್ಯ ವಿಧಾನಸಭೆಯ ಚುನಾವಣೆಯೂ ಯುದ್ಧ ಇದ್ದ ಹಾಗೆ. ಬಿಜೆಪಿಯವರೆಲ್ಲ ಕೌರವರು, ನಾವು ಕಾಂಗ್ರೆಸ್‌ನವರು ಪಾಂಡವರು ಇದ್ದ ಹಾಗೆ. ನಾವು ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಅವರ ಎದುರು ತಲೆ ತಗ್ಗಿಸುವ ಯಾವ ಕೆಲಸವನ್ನೂ ಮಾಡಿಲ್ಲ. ಬಿಜೆಪಿಯವರಿಗೆ ಸುಳ್ಳು ಹೇಳುವುದು ಬಿಟ್ಟು ಬೇರೆ ಏನು ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲ. ಕಾರ್ಯಕರ್ತರು, ಪದಾಧಿಕಾರಿಗಳು ಯಾವುದೆ ಆತಂಕ ಪಡುವ ಅಗತ್ಯವಿಲ್ಲ. ಕೆಲವರು ಬೋಗಸ್ ಏಜೆನ್ಸಿಗಳ ಮೂಲಕ ಉದ್ದೇಶಪೂರ್ವಕವಾಗಿ ಏನೇನೋ ಬರೆಸುತ್ತಿದ್ದಾರೆ. ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಎಷ್ಟೇ ತಿಪ್ಪರಲಾಗ ಹಾಕಿದರೂ ಮತ್ತೆ ಅಧಿಕಾರಕ್ಕೆ ಬರುವುದು ನಾವೇ ಎಂದು ಮುಖ್ಯಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News