ಫೆಡರರ್, ಜೊಕೊವಿಕ್, ಶರಪೋವಾ, ಕೆರ್ಬರ್ ಎರಡನೇ ಸುತ್ತಿಗೆ ಲಗ್ಗೆ

Update: 2018-01-16 18:41 GMT

ಮೆಲ್ಬೋರ್ನ್, ಜ.16: ಹಾಲಿ ಚಾಂಪಿಯನ್ ರೋಜರ್ ಫೆಡರರ್, ಆರು ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಕ್, ಸ್ವಿಸ್‌ನ ಸ್ಟಾನ್ ವಾವ್ರಿಂಕ ಆಸ್ಟ್ರೇಲಿಯನ್ ಓಪನ್‌ನಲ್ಲಿ ಎರಡನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

 ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ 36ರ ಹರೆಯದ ಸ್ವಿಸ್ ಆಟಗಾರ ಫೆಡರರ್ ಸ್ಲೋವಾನಿಯದ ಅಲ್‌ಜಾಝ್ ಬೆಡೆನೆ ವಿರುದ್ಧ 6-3, 6-4, 6-3 ನೇರ ಸೆಟ್‌ಗಳಿಂದ ಜಯ ಸಾಧಿಸಿದ್ದಾರೆ.

ಫೆಡರರ್ ಮುಂದಿನ ಸುತ್ತಿನಲ್ಲಿ ಜರ್ಮನಿಯ ಜಾನ್-ಲೆನ್ನಾರ್ಡ್‌ರನ್ನು ಎದುರಿಸಲಿದ್ದಾರೆ.

12 ಬಾರಿ ಗ್ರಾನ್‌ಸ್ಲಾಮ್ ಚಾಂಪಿಯನ್ ಜೊಕೊವಿಕ್ ಅಮೆರಿಕದ ಡೊನಾಲ್ಡ್ ಯಂಗ್‌ರನ್ನು 1 ಗಂಟೆ, 51 ನಿಮಿಷಗಳ ಹೋರಾಟದಲ್ಲಿ 6-1, 6-2, 6-4 ಸೆಟ್‌ಗಳಿಂದ ಸೋಲಿಸಿದರು. ಸರ್ಬಿಯದ ಮಾಜಿ ನಂ.1 ಆಟಗಾರ ಜೊಕೊವಿಕ್ ಆರು ತಿಂಗಳಿಂದ ಸಕ್ರಿಯ ಟೆನಿಸ್‌ನಿಂದ ದೂರ ಉಳಿದಿದ್ದರು. ಜೊಕೊವಿಕ್ ಮುಂದಿನ ಸುತ್ತಿನಲ್ಲಿ ಫ್ರಾನ್ಸ್‌ನ ಮೊನ್‌ಫಿಲ್ಸ್ ಅಥವಾ ಸ್ಪೇನ್‌ನ ಜೇಮ್ ಮುನಾರ್‌ರನ್ನು ಎದುರಿಸಲಿದ್ದಾರೆ.

ಮಾಜಿ ಚಾಂಪಿಯನ್ ಸ್ಟಾನ್ ವಾವ್ರಿಂಕ ಮೊದಲ ಸುತ್ತಿನಲ್ಲಿ ರಿಕಾರ್ಡಸ್ ಬೆರ್ನಾಂಕಿಸ್‌ರನ್ನು 6-3, 6-4,2-6,7-6(7/2)ಸೆಟ್‌ಗಳ ಅಂತರದಿಂದ ಮಣಿಸಿದರು. 2014ರಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿರುವ ವಾವ್ರಿಂಕ ಜುಲೈನಲ್ಲಿ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಮಂಗಳವಾರ ಮೊದಲ ಪಂದ್ಯ ಆಡಿದ್ದಾರೆ.

►ಶರಪೋವಾ, ಕೆರ್ಬರ್, ಪೆಟ್ಕೋವಿಕ್ ಶುಭಾರಂಭ:

ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಮಾಜಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಮರಿಯಾ ಶರಪೋವಾ, 2016ರ ಚಾಂಪಿಯನ್ ಏಂಜೆಲಿಕ್ ಕೆರ್ಬರ್ ಹಾಗೂ ಪೆಟ್ಕೋವಿಕ್ ಎರಡನೇ ಸುತ್ತಿಗೆ ತೇರ್ಗಡೆಯಾಗಿ ಶುಭಾರಂಭ ಮಾಡಿದ್ದಾರೆ.

ಶರಪೋವಾ ಮೊದಲ ಸುತ್ತಿನ ಪಂದ್ಯದಲ್ಲಿ ಟಾಟ್‌ಜಾನಾ ಮರಿಯಾ ವಿರುದ್ಧ 6-1, 6-4 ನೇರ ಸೆಟ್‌ಗಳಿಂದ ಜಯ ಸಾಧಿಸಿದ್ದಾರೆ.

ಐದು ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿ ವಿಜೇತೆ ಶರಪೋವಾ ಮುಂದಿನ ಸುತ್ತಿನಲ್ಲಿ 14ನೇ ಶ್ರೇಯಾಂಕದ ಅನಸ್ಟೆಸಿಜಾ ಸೆವಾಸ್ಟೋವಾರನ್ನು ಎದುರಿಸಲಿದ್ದಾರೆ. ಜರ್ಮನಿಯ ಕೆರ್ಬರ್ ತಮ್ಮದೇ ದೇಶದ ಅನ್ನಾ ಲೇನಾ ಫ್ರೈಡ್‌ಸಮ್‌ರನ್ನು 6-0, 6-4 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ. ಕೆರ್ಬರ್ ಮೊದಲ ಸೆಟ್‌ನ್ನು 17 ನಿಮಿಷಗಳಲ್ಲಿ ಗೆದ್ದುಕೊಂಡರು. ಎರಡನೇ ಸೆಟ್‌ನಲ್ಲಿ ಸ್ಪರ್ಧೆ ಎದುರಿಸಿದ ಕೆರ್ಬರ್ 6-4ರಿಂದ ಜಯ ಸಾಧಿಸಿ ಅಂತಿಮವಾಗಿ ಸತತ 10ನೇ ಜಯ ದಾಖಲಿಸಿದರು. ಇದರಲ್ಲಿ ಕಳೆದ ವಾರ ನಡೆದ ಸಿಡ್ನಿ ಇಂಟರ್‌ನ್ಯಾಶನಲ್ ಟೂರ್ನಿ ಪಂದ್ಯಗಳು ಸೇರಿವೆ. ಮೊದಲ ಸುತ್ತಿನ ಮ್ಯಾರಥಾನ್ ಪಂದ್ಯದಲ್ಲಿ ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೋವಾ ಜರ್ಮನಿಯ ಆ್ಯಂಡ್ರಿಯ ಪೆಟ್ಕೋವಿಕ್ ವಿರುದ್ಧ 6-3, 4-6,10-8 ಸೆಟ್‌ಗಳ ಅಂತರದಿಂದ ಸೋಲುವುದರೊಂದಿಗೆ ಕೂಟದಿಂದ ಹೊರ ನಡೆದಿದ್ದಾರೆ.

ಮೆಲ್ಬೋರ್ನ್ ಪಾರ್ಕ್‌ನಲ್ಲಿ ಈ ಹಿಂದೆ ಕ್ವಾರ್ಟರ್‌ಫೈನಲ್‌ಗೆ ತಲುಪಿದ್ದ ಕ್ವಿಟೋವಾ ಬಲಗೈ ಶಸ್ತ್ರಚಿಕಿತ್ಸೆಯ ಕಾರಣದಿಂದ ಕಳೆದ ವರ್ಷ ಟೂರ್ನಿಯಲ್ಲಿ ಆಡಿರಲಿಲ್ಲ.

ವಿಶ್ವದ ನಂ.9ನೇ ಆಟಗಾರ್ತಿ ಜೊಹನ್ನಾ ಕಾಂಟಾ ಅಮೆರಿಕದ ಮ್ಯಾಡಿಸನ್ ಬ್ರೆಂಗ್ಲೆ ಅವರನ್ನು 6-3, 6-1 ರಿಂದ ಮಣಿಸಿದರು. ಮುಂದಿನ ಸುತ್ತಿನಲ್ಲಿ ಬೆರ್ನಾರ್ಡ್ ಪೆರಾರನ್ನು ಎದುರಿಸಲಿದ್ದಾರೆ. ಪೆರಾ ರಶ್ಯದ ಕ್ವಾಲಿಫೈಯರ್ ಅನ್ನಾ ಬ್ಲಿಂಕೋವಾರನ್ನು 6-2, 6-2 ನೇರ ಸೆಟ್‌ಗಳಿಂದ ಸೋಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News