ಬಜೆಟ್ ಮಂಡನೆಗೆ ವಿಪಕ್ಷಗಳ ಅನುಮತಿ ಅಗತ್ಯವಿಲ್ಲ: ಯು.ಟಿ.ಖಾದರ್

Update: 2018-01-18 13:24 GMT

ಬೆಂಗಳೂರು, ಜ.18: ರಾಜ್ಯ ಸರಕಾರ ಬಜೆಟ್ ಅನ್ನು ಮಂಡನೆ ಮಾಡಬೇಕೆ, ಬೇಡವೇ ಎಂಬುದರ ಕುರಿತು ವಿರೋಧ ಪಕ್ಷದ ನಾಯಕರ ಅನುಮತಿ ಪಡೆಯುವ ಅಗತ್ಯವಿಲ್ಲ. ಮುಖ್ಯಮಂತ್ರಿ ತಮ್ಮ ವಿವೇಚನೆಯಂತೆ ಬಜೆಟ್ ಮಂಡನೆ ಮಾಡುತ್ತಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಹೇಳಿದರು.

ಗುರುವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರಕಾರ ದಿವಾಳಿಯಾಗಿದ್ದು, ಬಜೆಟ್ ಮಂಡನೆ ಮಾಡುವ ಬದಲು ಶ್ವೇತ್ರಪತ್ರ ಹೊರಡಿಸಲಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ನೀಡಿರುವ ಹೇಳಿಕೆಗೆ ಈ ರೀತಿ ಪ್ರತಿಕ್ರಿಯಿಸಿದರು.

ಬಿಜೆಪಿ ಸರಕಾರದ ಕೊನೆಯ ಬಜೆಟ್‌ನಲ್ಲಿ ರೈತರ ಸಾಲ ಮನ್ನಾ ಘೋಷಣೆ ಮಾಡಿದರು. ಆದರೆ, ಒಂದು ಪೈಸೆಯೂ ಅದಕ್ಕೆ ಇಡಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ರೈತರ ಸಾಲವನ್ನು ತೀರಿಸಲಾಯಿತು. ಅತಿಥಿ ಉಪನ್ಯಾಸಕರಿಗೆ ವೇತನ ನೀಡಲು ಅವರ ಬಳಿ ದುಡ್ಡಿರಲಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ನಮ್ಮ ಸರಕಾರ ಈಗ ಸರಿದಾರಿಗೆ ತಂದಿದೆ ಎಂದು ಅವರು ಹೇಳಿದರು.

ಮಹಾದಾಯಿ ನದಿ ನೀರು ವಿವಾದದಲ್ಲಿ ಯಾರು ನಾಟಕವಾಡುತ್ತಿದ್ದಾರೆ ಎಂಬುದರ ಕುರಿತು ಬಿಜೆಪಿ ನಾಯಕರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಗೋವಾ ಮುಖ್ಯಮಂತ್ರಿ ನೀರು ಹಂಚಿಕೆ ಕುರಿತು ನ್ಯಾಯಾಧೀಕರಣ ಅಥವಾ ನಮ್ಮ ರಾಜ್ಯದ ಮುಖ್ಯಮಂತ್ರಿಗೆ ಪತ್ರ ಬರೆಯಬೇಕು. ಆದರೆ, ಅವರು ಪತ್ರ ಬರೆದದ್ದು ಬಿಜೆಪಿಯ ರಾಜ್ಯಾಧ್ಯಕ್ಷರಿಗೆ. ಈ ವಿಚಾರದಲ್ಲಿ ಚರ್ಚೆ ನಡೆಯುವುದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಮನೆಯಲ್ಲಿ ಎಂದು ಅವರು ಟೀಕಿಸಿದರು.

ಗೋವಾ ಸರಕಾರದ ಸಚಿವರು ಕನ್ನಡಿಗರ ಬಗ್ಗೆ ಅವಹೇಳನಕಾರಿ ಪದವನ್ನು ಬಳಕೆ ಮಾಡುತ್ತಾರೆ. ರಾಜ್ಯದ ಬಿಜೆಪಿ ಮುಖಂಡರು ಅದರ ಬಗ್ಗೆ ಯಾಕೆ ಮಾತನಾಡುವುದಿಲ್ಲ. ಬಿಜೆಪಿಯವರಿಗೆ ನಮ್ಮ ಸರಕಾರದ ವಿರುದ್ಧ ಮಾತನಾಡಲು ಯಾವುದೆ ವಿಷಯಗಳಿಲ್ಲ. ಅವರು ಟೀಕೆಗಳನ್ನು ಮಾಡಿದಷ್ಟೂ ನಾವು ಮತ್ತಷ್ಟು ಸದೃಢರಾಗುತ್ತೇವೆ. ಇವರ ನಿಜ ಬಣ್ಣ ಜನರಿಗೆ ಗೊತ್ತಾಗಿದೆ ಎಂದು ಖಾದರ್ ಹೇಳಿದರು.

ಪ್ರಗತಿಪರರು ಹಾಗೂ ರಾಷ್ಟ್ರಕವಿ ಕುವೆಂಪು ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆಗೆ ಅವರ ಪಕ್ಷದವರೇ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದು ಖಾದರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News