ಪಡಿತರ ವಿತರಣೆಯಲ್ಲಿ ಪರಿಣಾಮಕಾರಿ ಕ್ರಮಗಳಿಂದ ಆಹಾರ ಇಲಾಖೆಗೆ ರಾಷ್ಟ್ರಪ್ರಶಸ್ತಿಯ ಗೌರವ: ಯು.ಟಿ.ಖಾದರ್

Update: 2018-01-18 13:36 GMT

ಬೆಂಗಳೂರು, ಜ.18: ಜನ ಜಾಗೃತಿ, ಪಡಿತರ ವಿತರಣೆಯಲ್ಲಿ ಕೈಗೊಂಡಿರುವ ಪರಿಣಾಮಕಾರಿ ಕ್ರಮಗಳಿಗಾಗಿ ರಾಜ್ಯದ ಆಹಾರ ಇಲಾಖೆಗೆ ರಾಷ್ಟ್ರಮಟ್ಟದ ಪ್ರಶಸ್ತಿ ಬಂದಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಹೇಳಿದರು.

ಗುರುವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಲಾಖೆಯ ಹಿಂದಿನ ಸಚಿವ ದಿನೇಶ್‌ಗುಂಡೂರಾವ್ ಸೇರಿದಂತೆ ಎಲ್ಲ ಅಧಿಕಾರಿಗಳು, ಸಿಬ್ಬಂದಿಗಳ ಶ್ರಮಕ್ಕೆ ಸಂದ ಗೌರವ ಇದಾಗಿದೆ ಎಂದರು.

ಅನ್ನಭಾಗ್ಯ ಯೋಜನೆಯನ್ನು ತಮ್ಮದು ಎಂದು ಬಿಂಬಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ. ಪ್ರತಿಯೊಬ್ಬ ವ್ಯಕ್ತಿಗೆ ತಲಾ ಏಳು ಕೆಜಿ ಅಕ್ಕಿಯನ್ನು ನಾವು ನೀಡುತ್ತಿದ್ದೇವೆ. ಅವರ ಪಕ್ಷದ ಅಧಿಕಾರದಲ್ಲಿರುವ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಡ, ಗುಜರಾತ್, ಉತ್ತರ ಪ್ರದೇಶ ಸೇರಿದಂತೆ ಯಾವುದಾದರೂ ರಾಜ್ಯದಲ್ಲಿ ಇಂತಹ ಯೋಜನೆ ಇದೆಯೇ ಎಂದು ಅವರು ಪ್ರಶ್ನಿಸಿದರು.

ದೇಶದಲ್ಲೆ ಈಗ ಕರ್ನಾಟಕ ಮಾದರಿಯಾಗಿದೆ. ಬಡವರಿಗಾಗಿ ಉತ್ತಮ ಯೋಜನೆಗಳನ್ನು ರೂಪಿಸಿದ ನಮ್ಮ ಸರಕಾರದ ಮಾದರಿ, ಇಡೀ ದೇಶ ಅನುಕರಣೆ ಮಾಡುವಂತಿದೆ. ಬಿಜೆಪಿ ಆಡಳಿತವಿರುವ ಯಾವುದಾದರೂ ರಾಜ್ಯದಲ್ಲಿ ಇಂತಹ ಯೋಜನೆ ಇದೆಯೇ ಎಂದು ಅವರು ಕೇಳಿದರು.

ಬಿಜೆಪಿ ಸರಕಾರದ ಆಡಳಿತದಲ್ಲಿ ಬಿಪಿಎಲ್ ಕಾರ್ಡುಗಳನ್ನು ಸರಿಯಾಗಿ ವಿತರಿಸಿಲ್ಲ. ಚುನಾವಣೆ ಸಂದರ್ಭದಲ್ಲಿ ಕಾರ್ಡುಗಳನ್ನು ನೀಡುವುದು, ನಂತರ ಅವುಗಳನ್ನು ಹಿಂಪಡೆಯುವುದರ ಮೂಲಕ ಸಾಕಷ್ಟು ಗೊಂದಲಗಳನ್ನು ಸೃಷ್ಟಿಸಿತ್ತು. ಆದರೆ, ನಮ್ಮ ಸರಕಾರವು ಆಧಾರ್ ಸಂಖ್ಯೆ ಜೋಡಣೆಯೊಂದಿಗೆ ಯಶಸ್ವಿಯಾಗಿ ಪಡಿತರ ಕಾರ್ಡುಗಳನ್ನು ವಿತರಿಸುವ ಕ್ರಮ ಕೈಗೊಂಡಿದೆ ಎಂದು ಖಾದರ್ ತಿಳಿಸಿದರು.

ಕಳೆದ ನಾಲ್ಕೂವರೆ ವರ್ಷಗಳ ಆಡಳಿತದಲ್ಲಿ ನಾವು 33.70 ಲಕ್ಷ ಬಿಪಿಎಲ್ ಕಾರ್ಡುಗಳನ್ನು ವಿತರಿಸಿದ್ದೇವೆ. ಇದರಿಂದ 1.30 ಕೋಟಿ ಜನರಿಗೆ ಪ್ರಯೋಜನವಾಗಿದೆ. ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಸುವ ವಿಧಾನವನ್ನು ಪಾರದರ್ಶಕವಾಗಿಡಲು ಆನ್‌ಲೈನ್ ವ್ಯವಸ್ಥೆ ತರಲಾಗಿದೆ. ಲಕ್ಷಾಂತರ ಬೋಗಸ್ ಕಾರ್ಡುಗಳನ್ನು ಪತ್ತೆ ಹಚ್ಚಿದ್ದೇವೆ. ಇದರಿಂದ ಸರಕಾರಕ್ಕೆ ವಾರ್ಷಿಕ 600-700 ಕೋಟಿ ರೂ.ಗಳಷ್ಟು ಉಳಿತಾಯವಾಗುತ್ತಿದೆ ಎಂದು ಖಾದರ್ ಹೇಳಿದರು.

ಅನ್ನಭಾಗ್ಯ ಯೋಜನೆಯನ್ನು ಕನ್ನಭಾಗ್ಯ ಎಂದು ಬಿಜೆಪಿಯವರು ಟೀಕಿಸಿದ್ದರು. ಆದರೆ, ಜನಸಾಮಾನ್ಯರು ಇದನ್ನು ನಮ್ಮ ಭಾಗ್ಯ ಎಂದು ಮೆಚ್ಚಿಕೊಂಡಿದ್ದಾರೆ. 4500 ಕೋಟಿ ರೂ.ಗಳನ್ನು ಸರಕಾರ ಇದಕ್ಕಾಗಿ ಖರ್ಚು ಮಾಡುತ್ತಿದೆ. ಇಡೀ ದೇಶದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ಹೆಚ್ಚು ಖರ್ಚು ಮಾಡುತ್ತಿರುವ ರಾಜ್ಯ ನಮ್ಮದು ಎಂದು ಅವರು ತಿಳಿಸಿದರು.

‘ಭಿಕ್ಷೆಯಲ್ಲ’ ನಮ್ಮ ಹಕ್ಕು: ರಾಜ್ಯದ ಜನರು ವಿವಿಧ ರೀತಿಯಲ್ಲಿ ನೀಡುವ ತೆರಿಗೆ ಹಣದಲ್ಲಿ ಕೇಂದ್ರ ಸರಕಾರ ನಮಗೆ ನಮ್ಮ ಪಾಲನ್ನು ನೀಡುತ್ತಿದೆ. ಅದು ಭಿಕ್ಷೆಯಲ್ಲ, ನಮ್ಮ ಹಕ್ಕು. ಆದರೆ, ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮಗೆ ಅನುದಾನ ಹಂಚಿಕೆಯಲ್ಲಿ ಅನ್ಯಾಯವಾಗಿದೆ. ಅದನ್ನು ಸರಿಪಡಿಸಲು ಬಿಜೆಪಿ ಸಂಸದರು ಹಾಗೂ ಕೇಂದ್ರ ಸಚಿವರು ಪ್ರಧಾನಿ ಮೇಲೆ ಒತ್ತಡ ಹೇರಲಿ ಎಂದು ಖಾದರ್ ಆಗ್ರಹಿಸಿದರು.

ಬಿಜೆಪಿಯವರು ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವುದಾಗಿ ಹೇಳುತ್ತಿದ್ದಾರೆ. ಆದರೆ, ನಾವು ಬಿಜೆಪಿ ಮುಕ್ತ, ಜೆಡಿಎಸ್ ಮುಕ್ತ ಎಂದು ಹೇಳಲ್ಲ. ಪ್ರತಿಪಕ್ಷದಲ್ಲಿರುವ ಅವರನ್ನು ಜೊತೆಯಲ್ಲಿಯೆ ಕರೆದುಕೊಂಡು ಹೋಗುವ ಪ್ರಯತ್ನ ನಮ್ಮದು ಎಂದು ಅವರು ಹೇಳಿದರು.

ಸಾವಿರಾರು ಸಂಸ್ಥೆಗಳಲ್ಲಿರುವ ನಿರ್ಗತಿಕರು, ವೃದ್ಧರಿಗಾಗಿ ದಾಸೋಹ ಯೋಜನೆ ಹಮ್ಮಿಕೊಂಡಿದ್ದೇವೆ. ಈ ಯೋಜನೆಯಡಿಯಲ್ಲಿ ಸುಮಾರು 28 ಸಾವಿರ ಮಂದಿಗೆ ವಸತಿ ಮತ್ತು ಊಟವನ್ನು ಒದಗಿಸುತ್ತಿದ್ದೇವೆ. ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿಯಲ್ಲಿ ಸುಮಾರು 20 ಲಕ್ಷ ಫಲಾನುಭವಿಗಳಿಗೆ ಹಂತ ಹಂತವಾಗಿ ಅಡುಗೆ ಅನಿಲ ಸಂಪರ್ಕವನ್ನು ಕಲ್ಪಿಸಲಾಗುವುದು ಎಂದು ಖಾದರ್ ತಿಳಿಸಿದರು.

ವಲಸೆ ಕಾರ್ಮಿಕರಿಗೆ ಪಡಿತರ
ಗುಜರಾತ್, ಓಡಿಶಾ, ಉತ್ತರಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಉದ್ಯೋಗಕ್ಕಾಗಿ ನಮ್ಮ ರಾಜ್ಯಕ್ಕೆ ಬರುವ ವಲಸೆ ಕಾರ್ಮಿಕರಿಗೆ ಪಡಿತರ ವಿತರಣೆ ಮಾಡುವ ಯೋಜನೆಯನ್ನು ಕೇಂದ್ರ ಸರಕಾರ ಜಾರಿಗೆ ತರಲಿ. ರಾಜ್ಯ ಸರಕಾರವು ಅದಕ್ಕೆ ಬೇಕಾದ ಎಲ್ಲ ನೆರವನ್ನು ನೀಡಲು ಸಿದ್ಧವಿದೆ.
-ಯು.ಟಿ.ಖಾದರ್, ಆಹಾರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News