ಇಬ್ಬರು ಜೆಡಿಎಸ್ ಶಾಸಕರು ಬಿಜೆಪಿ ಸೇರ್ಪಡೆ

Update: 2018-01-18 14:00 GMT

ಬೆಂಗಳೂರು, ಜ. 18: ಜೆಡಿಎಸ್ ಶಾಸಕರಾದ ಲಿಂಗಸುಗೂರು ಕ್ಷೇತದ ಮಾನಪ್ಪ ವಜ್ಜಲ್ ಹಾಗೂ ರಾಯಚೂರು ನಗರ ಕ್ಷೇತ್ರದ ಡಾ.ಶಿವರಾಜ ಪಾಟೀಲ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

ಗುರುವಾರ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತಕುಮಾರ್, ಪಿಯೂಷ್ ಗೋಯಲ್, ರಾಜ್ಯ ಉಸ್ತುವಾರಿ ಮುರುಳೀಧರ ರಾವ್, ಉಭಯ ಮುಖಂಡರನ್ನು ಪಕ್ಷದ ಬಾವುಟ ನೀಡುವ ಮೂಲಕ ಪಕ್ಷಕ್ಕೆ ಬರ ಮಾಡಿಕೊಂಡರು.

ಇದೇ ಸಂದರ್ಭದಲ್ಲಿ 2013ರ ವಿಧಾನಸಭೇ ಚುನಾವಣೆಯಲ್ಲಿ ಗೌರಿಬಿದನೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಕಂಡಿದ್ದ ಜೈಪಾಲರೆಡ್ಡಿ, ಕಾಂಗ್ರೆಸ್ ಪಕ್ಷದ ಮುಖಂಡರಾದ ಸತೀಶ್ ಕುಮಾರ್, ಶಂಕರಪ್ಪಅವರು ಬಿಜೆಪಿಗೆ ಸೇರ್ಪಡೆಯಾದರು.

ರಾಜ್ಯದಲ್ಲಿ ಬಿಜೆಪಿ ಅಲೆ: ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಇದೆ ಎಂಬುದಕ್ಕೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಇಂದು ಪಕ್ಷಕ್ಕೆ ಸೇರ್ಪಡೆಯಾಗಿದ್ದೆ ಸಾಕ್ಷಿ. ಪಕ್ಷಕ್ಕೆ ಸೇರ್ಪಡೆಯಾಗುವ ದೊಡ್ಡ ಪಟ್ಟಿಯೇ ಇದ್ದು, ಆರಂಭಕ್ಕೆ ಇಬ್ಬರು ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಪಿಯೂಷ್ ಗೋಯಲ್, ಜೆಡಿಎಸ್ ಅಸ್ತಿತ್ವ ಒಂದು ಪ್ರದೇಶಕ್ಕೆ ಸೀಮಿತ. ಬಿಜೆಪಿ ವಿಶ್ವದಲ್ಲೆ ಅತ್ಯಂತ ದೊಡ್ಡ ಪಕ್ಷವಾಗಿದ್ದು, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಯಾವುದೇ ಉದ್ದೇಶ ಇಲ್ಲ ಎಂದು ಸ್ಪಷ್ಟಣೆ ನೀಡಿದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ: ಬೆಳಗ್ಗೆ 11ಗಂಟೆ ಸುಮಾರಿಗೆ ಶಾಸಕರಾದ ಮಾನಪ್ಪ ವಜ್ಜಲ್ ಮತ್ತು ಡಾ. ಶಿವರಾಜ ಪಾಟೀಲ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ವಿಧಾನಸೌಧಕ್ಕೆ ಆಗಮಿಸಿದರು. ಆದರೆ ಸ್ಪೀಕರ್ ಕೆ.ಬಿ.ಕೋಳಿವಾಡ ಕಚೇರಿಯಲ್ಲಿ ಇರಲಿಲ್ಲ. ಹೀಗಾಗಿ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿಗೆ ರಾಜೀನಾಮೆ ಪತ್ರ ನೀಡಿದರು.

ವಿಧಾನಸಭೆ ನಿಯಮಾವಳಿ ಪ್ರಕಾರ ಶಾಸಕರು ನೇರವಾಗಿ ಸ್ಪೀಕರ್ ಅವರಿಗೆ ರಾಜೀನಾಮೆ ಸಲ್ಲಿಸಬೇಕು. ಆದರೆ, ಸ್ಪೀಕರ್ ಕೋಳಿವಾಡ ಅವರೇ ನನ್ನ ಬಳಿ ಕೊಟ್ಟು ಹೋಗುವಂತೆ ತಿಳಿಸಿದ್ದಾರೆಂದು ಉಭಯ ಶಾಸಕರು ಹೇಳಿದ್ದರಿಂದ ರಾಜೀನಾಮೆ ಪತ್ರಗಳನ್ನು ಪಡೆದಿದ್ದೇನೆ ಎಂದು ಎಸ್.ಮೂರ್ತಿ ಹೇಳಿದರು.

‘ಒಂದು ವರ್ಷದಿಂದ ಜೆಡಿಎಸ್‌ನಲ್ಲಿ ನೋವು ಅನುಭವಿಸಿದ್ದೇವೆ. ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿ ಎಂದು ಈಗಾಗಲೇ ಕೆಲವರು ಘೋಷಿಸಿಕೊಂಡಿದ್ದಾರೆ. ಈ ಬಗ್ಗೆ ವರಿಷ್ಠರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹೀಗಾಗಿ ಶಾಸಕ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತೇನೆ’
-ಮಾನಪ್ಪ ವಜ್ಜಲ್ ಲಿಂಗಸೂರು ಶಾಸಕ

‘ಜೆಡಿಎಸ್ ಪಕ್ಷದಲ್ಲಿ ನಮ್ಮ ಮಾತಿಗೆ ಯಾವುದೇ ಮನ್ನಣೆ ಇರಲಿಲ್ಲ. ರಾಜ್ಯಾಧ್ಯಕ್ಷ್ಷೆ ಎಚ್.ಡಿ.ಕುಮಾರಸ್ವಾಮಿ ಅವರ ಗಮನಕ್ಕೆ ತಂದರೂ ಯಾವುದೇ ಬದಲಾವಣೆ ಆಗಲಿಲ್ಲ. ಇದರಿಂದ ಬೇಸತ್ತು ಪಕ್ಷ ತೊರೆದಿದ್ದು, ಅತ್ಯಂತ ಸಂತೋಷದಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದೇವೆ’.

ಡಾ.ಶಿವರಾಜ ಪಾಟೀಲ್ ರಾಯಚೂರು ನಗರ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News