ತ್ರಿವಳಿ ತಲಾಕ್ ಮಸೂದೆ ಖಂಡಿಸಿ ಜ.20 ರಂದು ಪ್ರತಿಭಟನೆ

Update: 2018-01-18 14:07 GMT

ಬೆಂಗಳೂರು, ಜ.18: ತ್ರಿವಳಿ ತಲಾಕ್ ಮಸೂದೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ವತಿಯಿಂದ ಜ.20 ರಂದು ನಗರದ ಪುರಭವನದ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೀಗ್‌ನ ಅಧ್ಯಕ್ಷ ಡಾ.ಮುಹಮ್ಮದ್ ಫಾರೂಕ್, ಕೇಂದ್ರ ಸರಕಾರ ಮುಸ್ಲಿಂಮರ ಸಾಂಸ್ಕೃತಿಕ ಗುರುತನ್ನು ನಾಶ ಮಾಡಲು ಮುಂದಾಗಿದೆ. ಅನಗತ್ಯವಾದ ನೀತಿಗಳನ್ನು ಸಮುದಾಯದ ಮೇಲೆ ಹೇರಿಕೆ ಮಾಡಲಾಗುತ್ತಿದೆ. ಮುಸ್ಲಿಮರ ಭಾವನಾತ್ಮಕ ವಿಚಾರಗಳ ಮೇಲೆ ದಾಳಿ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.

ದೇಶದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ನಂತರ ಮುಸ್ಲಿಮರ ಮೇಲಿನ ದಬ್ಬಾಳಿಕೆ ಹೆಚ್ಚಾಗಿದೆ. ಗೋ ಸಂರಕ್ಷಣೆ ಹೆಸರಿನಲ್ಲಿ ಮುಸ್ಲಿಮರು ಸೇರಿದಂತೆ ದಲಿತ, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವವನ್ನು ಧಿಕ್ಕರಿಸಿ, ಜಾತ್ಯತೀತ ತತ್ವಗಳನ್ನು ದಮನ ಮಾಡಲಾಗುತ್ತಿದೆ ಎಂದು ಹೇಳಿದರು.

ಸುಪ್ರೀಂ ಕೋರ್ಟ್‌ಗೆ ಮುಸ್ಲಿಂ ಮಹಿಳೆ ಒಬ್ಬರು ತಲಾಕ್ ಎಂಬ ಮುಸ್ಲಿಂ ಶರೀಅತ್ ಕಾನೂನಿನ ವಿರುದ್ಧ ಸಲ್ಲಿಸಿದ್ದ ಅರ್ಜಿಗೆ ನ್ಯಾಯಾಲಯ ಕೇಂದ್ರದ ಅಫಿದವಿಟ್ ಕೇಳಿ ಆದೇಶ ನೀಡಿದೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೇಂದ್ರ ಸರಕಾರ ಮುಸ್ಲಿಂ ಶರೀಅತ್ ಕಾನೂನನ್ನು ಮೊಟಕುಗೊಳಿಸಿ ತ್ರಿಬಲ್ ತಲಾಕ್ ವಿರುದ್ಧ ಹಾಗೂ ಏಕರೂಪದ ನಾಗರಿಕ ಸಂಹಿತೆ ಜಾರಿ ಮಾಡಲು ಮುಂದಾಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಲೀಗ್‌ನ ಪ್ರಧಾನ ಕಾರ್ಯದರ್ಶಿ ವಕೀಲ ಮೀರ್ ಮುನೀರ್ ಅಹಮ್ಮದ್, ಕಾರ್ಯದರ್ಶಿಗಳಾದ ಅಬ್ದುಲ್ ಖಾದೀರ್ ಮಿಟ್ರೊ, ಅಬ್ದುಲ್ ಲತೀಫ್, ಶೇಖ್ ನಸೀರ್ ಅಹಮದ್, ಖಜಾಂಚಿ ತನ್ವೀರ್ ಮೊಹಮ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News