ನಟ-ನಿರ್ದೇಶಕ ಕಾಶೀನಾಥ್ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

Update: 2018-01-18 14:21 GMT

ಬೆಂಗಳೂರು, ಜ. 18: ಕನ್ನಡ ಚಿತ್ರರಂಗದ ಹೆಸರಾಂತ ನಟ ನಿರ್ದೇಶಕ ಕಾಶೀನಾಥ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ತಮ್ಮ ತಂದೆ ವಾಸುದೇವ ರಾವ್ ಶಿವಮೊಗ್ಗ ಜೋಗದ ಹಿರೇಭಾಸ್ಕರ್‌ನಲ್ಲಿ ಉಪಾಹಾರ ಮಂದಿರ ನಡೆಸುತ್ತಿದ್ದ ಸಂದರ್ಭದಲ್ಲಿ ರಮಣೀಯ ಪರಿಸರದಲ್ಲಿ ಸಾಧಾರಣ ಕುಟುಂಬಗಳಲ್ಲಿನ ಸಣ್ಣ-ಸಣ್ಣ ಘಟನೆಗಳನ್ನೂ ಗಮನಿಸುತ್ತಿದ್ದ ಕಾಶೀನಾಥ್, ಬೆಂಗಳೂರಿನ ಜಯನಗರದಲ್ಲಿ ತಂದೆಯ ಮಾಲಕತ್ವದ ಗಾಯಿತ್ರಿ ಸ್ಟೋರ್ಸ್‌ಗೆ ಆಗಮಿಸುತ್ತಿದ್ದ ಗ್ರಾಹಕರ ರುಚಿ- ಅಭಿರುಚಿಯನ್ನು ಗ್ರಹಿಸಿ, ಬರೆಯುವ ಗೀಳು ಬೆಳೆಸಿಕೊಂಡು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಮುಂದಾದಾಗ ಅವರಿಗೆ ಯಾವುದೇ ಅನುಭವ ಇರಲಿಲ್ಲ. ಅಪರೂಪದ ಅತಿಥಿಗಳು ಚಿತ್ರ ನಿರ್ದೇಶಿಸುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿ, ಅಪರಿಚಿತ ಚಿತ್ರದ ನಿರ್ದೇಶಿಸಿ ಕನ್ನಡ ಕುಲಕೋಟಿಗೆ ಪರಿಚಿತರಾಗಿ, ‘ಅನುಭವ’ ಚಿತ್ರದ ಮೂಲಕ ತನ್ನ ಪ್ರತಿಭೆಯನ್ನು ಪರಿಚಯಿಸುವುದರೊಂದಿಗೆ ಅಭಿನಯ ಮತ್ತು ಉಮಾಶ್ರೀ ಅವರನ್ನು ಪರಿಚಯಿಸಿದ ಕಾಶೀನಾಥ್ ಎಂಬ ಈ ಅದ್ಭುತ ಪ್ರತಿಭೆ ಉಪೇಂದ್ರರಿಗೂ ಸಹಾಯಕ ನಿರ್ದೇಶಕನಾಗಿ, ಗೀತ ರಚನಕಾರನಾಗಿ ಹಾಗೂ ನಟನಾಗಿ ಬೆಳೆಯಲು ವೇದಿಕೆ ಕಲ್ಪಿಸಿದರು.

‘ಅವಳೇ ನನ್ನ ಹೆಂಡ್ತಿ’ ಚಿತ್ರದಲ್ಲಿ ವರದಕ್ಷಿಣೆ ಹಾಗೂ ಹೆಣ್ಣಿನ ಶೋಷಣೆಯ ವಿಷಯವನ್ನು ಹಾಸ್ಯಭರಿತವಾಗಿ ಚಿತ್ರಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದ ಕಾಶೀನಾಥ್ ತಮ್ಮ ಬಹುತೇಕ ಚಿತ್ರಗಳ ಶೀರ್ಷಿಕೆಯನ್ನು ಅಕಾರದಲ್ಲೇ ಪ್ರಾರಂಭಿಸಿ ಎಲ್ಲರ ಗಮನ ಸೆಳೆದಿದ್ದರು.

ಪೋಷಕ ಪಾತ್ರದಲ್ಲೇ ತೃಪ್ತಿಪಟ್ಟುಕೊಳ್ಳಬೇಕಾದ ಹಾಸ್ಯ ನಟನೆಗೆ ಕನ್ನಡ ಚಿತ್ರರಂಗದಲ್ಲಿ ನಾಯಕ ಸ್ಥಾನ ದೊರಕಿಸಿಕೊಟ್ಟದ್ದು ಕಾಶೀನಾಥ್ ಅವರ ಗಮನಾರ್ಹ ಸಾಧನೆ. ತಮ್ಮ ಚಿತ್ರಗಳಲ್ಲಿ ಎಲ್ಲರನ್ನೂ ನಕ್ಕು ನಗಿಸಿ, ಸಂತಸ ಮೂಡಿಸುತ್ತಿದ್ದ ಕಾಶೀನಾಥ್ ಅವರು ಇಂದು ನಮ್ಮನ್ನಗಲಿ ದುಃಖ ಮೂಡಿಸಿದ್ದಾರೆಂದು ಸಿದ್ದರಾಮಯ್ಯ ಅವರು ಬಣ್ಣಿಸಿದ್ದಾರೆ.

ಕಾಶೀನಾಥ್ ಅವರ ಆತ್ಮಕ್ಕೆ ಶಾಂತಿ ಲಭಿಸಲಿ. ಕಾಶೀನಾಥ್ ಅವರ ಕುಟುಂಬ ವರ್ಗ ಹಾಗೂ ಅಭಿಮಾನಿ ವರ್ಗಕ್ಕೆ ಅವರ ಅಗಲಿಕೆಯಿಂದ ಉಂಟಾದ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News