ಕೆ.ಸಿ.ರೆಡ್ಡಿ ಪ್ರತಿಮೆ ಸ್ಥಾಪನೆಗೆ ಆಗ್ರಹ

Update: 2018-01-18 14:40 GMT

ಬೆಂಗಳೂರು, ಜ.18: ವಿಧಾನಸೌಧದ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಪ್ರತಿಮೆ ಸ್ಥಾಪಿಸಬೇಕು ಎಂದು ಕೆ.ಸಿ.ರೆಡ್ಡಿ ಅವರ ಮೊಮ್ಮಗಳು ವಸಂತ ಕವಿತಾ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ಸಂಘಟನೆಗಳು, ರಾಜಕೀಯ ಪಕ್ಷದ ನಾಯಕರು ಸುಮಾರು ಐದು ವರ್ಷಗಳಿಂದ ವಿಧಾನಸೌಧದ ಆವರಣದಲ್ಲಿ ಕೆ.ಸಿ.ರೆಡ್ಡಿ ಅವರ ಪ್ರತಿಮೆ ಸ್ಥಾಪಿಸಬೇಕೆಂದು ಮನವಿ ಮಾಡಿದ್ದರೂ ಸರಕಾರ ಯಾವುದೇ ಕ್ರಮ ಕೈಗೊಳ್ಳದೇ ಮಾಜಿ ಸಿಎಂಗೆ ಅವಮಾನ ಮಾಡುತ್ತಿದ್ದಾರೆ ಎಂದು ದೂರಿದರು.

ರಾಜ್ಯ ಸರಕಾರ ತನ್ನ ಐದು ವರ್ಷಗಳ ಅಧಿಕಾರ ಅವಧಿ ಪೂರ್ಣಗೊಳಿಸುತ್ತಿದೆ. ಈ ಅವಧಿಯಲ್ಲಿ ಕನಕದಾಸ ಪ್ರತಿಮೆ ಸೇರಿದಂತೆ ಅನೇಕ ಪ್ರತಿಮೆಗಳನ್ನು ಸ್ಥಾಪನೆ ಮಾಡಲಾಗಿದೆ. ಆದರೆ, ಕೆ.ಸಿ.ರೆಡ್ಡಿ ಅವರು ನೆನಪಾಗದಿರುವುದು ನಾಚಿಕೇಡಿನ ಸಂಗತಿ. ರಾಜ್ಯ ಸರಕಾರ ಕನಕದಾಸ ಪ್ರತಿಮೆ ಸ್ಥಾಪನೆ ಮಾಡುವ ಮೂಲಕ ಮುಂದಿನ ಚುನಾವಣೆಯಲ್ಲಿ ಮತದಾರರನ್ನು ಓಲೈಸಲು ಮುಂದಾಗಿದೆ. ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದ್ದು, ಅದರಲ್ಲಿ ವಿಧಾನಸೌಧದ ಆವರಣದಲ್ಲಿ ಕೆ.ಸಿ.ರೆಡ್ಡಿ ಪ್ರತಿಮೆ ಸ್ಥಾಪನೆ ಮಾಡಬೇಕು. ಅಸೆಂಬ್ಲಿ ಹಾಲ್‌ನಲ್ಲಿ ಅವರ ಭಾವಚಿತ್ರ ಅನಾವರಣ ಮಾಡಬೇಕು. ಬಿಬಿಎಂಪಿಯನ್ನು ಕೆ.ಸಿ.ರೆಡ್ಡಿ ಹೆಸರಿನಲ್ಲಿ ಮರು ನಾಮಕರಣ ಮಾಡಬೇಕು. ಗಾಂಧಿಯನ್ ಆಫ್ ಕರ್ನಾಟಕ ಎಂಬ ಬಿರುದು ಕೊಡಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿ ಮಾಡಲಾಗಿದೆ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News