ಸದಾಶಿವ ಆಯೋಗದ ವರದಿ ಯಥಾವತ್ತಾಗಿ ಜಾರಿ ಮಾಡಲು ಆಗ್ರಹ
ಬೆಂಗಳೂರು, ಜ.18: ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಯಾವುದೇ ಬದಲಾವಣೆ ಮಾಡದೇ ಯಥಾವತ್ತಾಗಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಸಲ್ಲಿಸಬೇಕು ಎಂದು ಕರ್ನಾಟಕ ಮಾದಿಗರ ಸಂಘಟನೆಗಳ ಸ್ವಾಭಿಮಾನದ ಒಕ್ಕೂಟ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಮುಖಂಡ ಎನ್.ಮೂರ್ತಿ, ಆಯೋಗದ ವರದಿಯಲ್ಲಿ ಸೂಚಿಸಿರುವಂತೆ ಒಳ ಮೀಸಲಾತಿ ವರ್ಗೀಕರಣದಲ್ಲಿ ಮಾದಿಗ ಸಂಬಂಧಿತ ಜಾತಿಗಳಿಗೆ ಶೇ.6 ರಷ್ಟು, ವಲಯ ಸಂಬಂಧಿತ ಜಾತಿಗಳಿಗೆ ಶೇ.5 ರಷ್ಟು, ಲಂಬಾಣಿ, ಭೋವಿಗಳಿಗೆ ಶೇ.3 ರಷ್ಟು ಹಾಗೂ ಇನ್ನುಳಿದ ಜಾತಿಗಳಿಗೆ ಶೇ.1 ರಷ್ಟು ಒಳ ಮೀಸಲಾತಿ ಕಲ್ಪಿಸುವಂತೆ ಶಿಫಾರಸ್ಸು ಮಾಡಲಾಗಿದೆ ಎಂದು ಹೇಳಿದರು.
ಆದರೆ, ಕೆಲವು ದಲಿತ ಮುಖಂಡರುಗಳು ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ ಮಾಡುವ ಸಂಬಂಧ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಮೂರು ದಿನಗಳ ಹಿಂದೆ ನಡೆದ ಸಭೆಯಲ್ಲಿ ಶೇ.5.5 ಸಮಾನವಾಗಿ ಹಂಚಿಕೆ ಮಾಡಿಕೊಳ್ಳಲು ತೀರ್ಮಾನ ಮಾಡಲು ಮುಂದಾಗಿದ್ದಾರೆ. ಇದನ್ನು 20 ವರ್ಷಗಳಿಂದ ಒಳ ಮೀಸಲಾತಿ ಜಾರಿಗಾಗಿ ಹೋರಾಟ ಮಾಡುತ್ತಿರುವ ಮಾದಿಗ ಸಂಘಟನೆಗಳು ಖಂಡಿಸುತ್ತವೆ ಎಂದು ತಿಳಿಸಿದರು.
ನ್ಯಾ.ಎ.ಜೆ.ಸದಾಶಿವ ಅವರು ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿ ಅನುಭವ ಪಡೆದಿದ್ದವರು. ಅಲ್ಲದೆ, ಕಾನೂನಿನ ಪರಿಮಿತಗಳನ್ನು ಬಲ್ಲವರಾಗಿದ್ದರು. ಮೀಸಲಾತಿಯಲ್ಲಿ ಒಳ ಮೀಸಲಾತಿಗೆ ಸಂಬಂಧಿಸಿದಂತೆ ದೇಶದ ಹಲವು ರಾಜ್ಯಗಳ ತೀರ್ಪುಗಳನ್ನು ಅಧ್ಯಯನ ಮಾಡಿದ್ದಾರೆ. ಮೀಸಲಾತಿಯಲ್ಲಿನ ತಾರತಮ್ಯವನ್ನು ಪರಿಗಣಿಸಿ ಒಳ ಮೀಸಲಾತಿಯನ್ನು ನೀಡಬೇಕು ಎಂದು ಶಿಫಾರಸ್ಸು ಮಾಡಿದ್ದಾರೆ ಎಂದರು.
ಸದಾಶಿವ ಆಯೋಗ ಸಲ್ಲಿಸಿರುವ ವರದಿಯು ಕೇವಲ ಎಡ ಮತ್ತು ಸಮುದಾಯಗಳಿಗೆ ಮಾತ್ರ ಸೀಮಿತವಾಗದೇ ರಾಜ್ಯದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ ಅನೇಕ ಶೋಷಿತ ಸಮುದಾಯಗಳ ಪೌರಕಾರ್ಮಿಕ, ಅಲೆಮಾರಿಗಳ ಆರ್ಥಿಕ ಸ್ಥಿತಿಗತಿಗಳನ್ನು ಪರಿಶೀಲಿಸಿ ನೀಡಿದ್ದಾರೆ. ಹೀಗಾಗಿ, ಸರಕಾರ ಈ ವರದಿಯಲ್ಲಿರುವ ಯಾವುದೇ ಅಂಶವನ್ನು ಕೈ ಬಿಡಬಾರದು ಹಾಗೂ ಸೇರ್ಪಡೆ ಮಾಡಬಾರದು. ಯಥಾವತ್ತಾಗಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಆಗ್ರಹಿಸಿದರು.