ನಾಗರಾಜ್‌ಗೆ ಠಾಣೆಗೆ ಹಾಜರಾಗುವುದರಿಂದ ವಿನಾಯಿತಿ ನೀಡಿದ ಹೈಕೋರ್ಟ್

Update: 2018-01-18 15:15 GMT

ಬೆಂಗಳೂರು, ಜ.18: ಮಗನ ಮದುವೆಯ ಹಿನ್ನೆಲೆಯಲ್ಲಿ ಗುರುವಾರ ಶ್ರೀರಾಂಪುರ ಪೊಲೀಸ್ ಠಾಣೆಗೆ ಹಾಜರಾಗಬೇಕಿರುವುದರಿಂದ ಮಾಜಿ ರೌಡಿ ಶೀಟರ್ ವಿ.ನಾಗರಾಜ್‌ಗೆ ಹೈಕೋರ್ಟ್ ವಿನಾಯಿತಿ ನೀಡಿದೆ.

ಅಮಾನ್ಯಗೊಂಡ 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ಅಕ್ರಮವಾಗಿ ಬದಲಿಸಿದ ಆರೋಪ ಸಂಬಂಧ ಶ್ರೀರಾಂಪುರ ಠಾಣಾ ಪೊಲೀಸರು ತಮ್ಮ ವಿರುದ್ಧ ದಾಖಲಿಸಿದ್ದ ಪ್ರಕರಣದಲ್ಲಿ ಹೈಕೋರ್ಟ್ 2017ರ ಸೆ.21ರಂದು ತಮಗೆ ಜಾಮೀನು ನೀಡಿತ್ತು. ಈ ವೇಳೆ ತನಿಖೆ ಪೂರ್ಣವಾಗುವರೆಗೂ ಪ್ರತಿ ಗುರುವಾರ ಶ್ರೀರಾಮಪುರ ಠಾಣೆಗೆ ಹಾಜರಾಗಬೇಕು ಎಂದು ಹೈಕೋರ್ಟ್ ಷರತ್ತು ವಿಧಿಸಿದೆ.

ಗುರುವಾರ ಸಂಜೆ 6.30ಕ್ಕೆ ನಾಗರಾಜ್ ಪುತ್ರ ಗಾಂಧಿ ಅವರ ಆರಕ್ಷತೆ ಮತ್ತು ಜ.19ರಂದು ಬೆಳಗ್ಗೆ 8.30ಕ್ಕೆ ಮುಹೂರ್ತ ನಿಗದಿಯಾಗಿತ್ತು. ಇದರಿಂದ ಗುರುವಾರ ಶ್ರೀರಾಂಪುರ ಠಾಣೆಗೆ ಹಾಜರಾಗುವುದರಿಂದ ವಿನಾಯಿತಿ ನೀಡುವಂತೆ ಕೋರಿ ವಿ.ನಾಗರಾಜು ಮತ್ತವರ ಪುತ್ರನಾದ ಎನ್.ಗಾಂಧಿ (ಮದುವೆ ಗಂಡು) ಹಾಗೂ ಶಾಸ್ತ್ರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಗುರುವಾರ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರತ್ನಕಲಾ ಅವರ ಪೀಠ, ಶ್ರೀರಾಂಪುರ ಠಾಣೆಗೆ ಗುರುವಾರ ಹಾಜರಾಗುವುದರಿಂದ ನಾಗರಾಜು ಮತ್ತವರ ಪುತ್ರರಿಗೆ ವಿನಾಯಿತಿ ನೀಡಿತು. ಹಾಗೆಯೇ, ಠಾಣೆಗೆ ಹಾಜರಾಗುವುದಕ್ಕೆ ಶಾಶ್ವತ ವಿನಾಯಿತಿ ನೀಡಲು ಕೋರಿರುವ ಅರ್ಜಿ ವಿಚಾರಣೆ ಮುಂದೂಡಿತು. 2016ರ ನ.8ರಂದು ಅಮಾನ್ಯಗೊಂಡಿದ್ದ 500 ಹಾಗೂ 1000 ರೂ.ಮುಖಬೆಲೆ ನೋಟುಗಳು ಅಕ್ರಮವಾಗಿ ಬದಲಿಸಿದ ಪ್ರಕರಣದಲ್ಲಿ ಈ ಮೂವರು ಆರೋಪಿಗಳಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News