ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ದತ್ತಾಂಶ ಸಂಗ್ರಹಣೆ ಅತ್ಯಗತ್ಯ: ಸಚಿವ ಎಂ.ಆರ್.ಸೀತಾರಾಂ

Update: 2018-01-18 15:19 GMT

ಬೆಂಗಳೂರು, ಜ. 18: ಸರಕಾರದ ಯೋಜನೆಗಳು ಯಶಸ್ವಿಯಾಗಬೇಕಾದಲ್ಲಿ ಕಾಲಕಾಲಕ್ಕೆ ಆಯಾ ರಾಜ್ಯದಲ್ಲಿ ಕೈಗೊಳ್ಳುವ ಯೋಜನಾವಾರು ಸಮೀಕ್ಷೆಗಳು ಬಹುಮುಖ್ಯ ಪಾತ್ರ ವಹಿಸುತ್ತವೆ ಎಂದು ಯೋಜನಾ, ಸಾಂಖ್ಯಿಕ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಎಂ.ಆರ್.ಸೀತಾರಾಂ ಹೇಳಿದ್ದಾರೆ.

ಗುರುವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ 25ನೆ ಕೇಂದ್ರ ಮತ್ತು ರಾಜ್ಯ ಸಂಖ್ಯಾ ಸಂಸ್ಥೆಗಳ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸರಕಾರದಲ್ಲೂ ಬೆಳೆ ವಿಮೆ, ಕೃಷಿ ಪ್ರದೇಶ, ಮಳೆ ಇತ್ಯಾದಿ ಕುರಿತು ವಿವಿಧ ಸಮೀಕ್ಷಾ ಕಾರ್ಯವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲಾಗಿದ್ದು, ಇದು ವಿವಿಧ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ಕಾರಣವಾಗಿದೆ ಎಂದರು.

ವಸಂಖ್ಯಾ ಸಂಗ್ರಹಣಾ ಸಮೀಕ್ಷೆಗಳನ್ನು ಆಧರಿಸಿ ಆಧ್ಯತೆಯನುಸಾರ ವಿವಿಧ ಯೋಜನೆಗಳ ರಚನೆ, ಅನುಷ್ಠಾನಗೊಳ್ಳುವಿಕೆಯಂತಹ ಪ್ರಕ್ರಿಯೆಗಳು ಸರಕಾರದ ಹಂತದಲ್ಲಿ ನಡೆಯುತ್ತದೆ ಎಂದ ಅವರು, ರಾಜ್ಯದಲ್ಲೂ ಸಕಾಲದಲ್ಲಿ ನಡೆದ ಬೆಳೆ ವಿಮೆ ಸಮೀಕ್ಷೆಯಿಂದಾಗಿ ಬೀದರ್, ಕಲಬುರ್ಗಿ, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ತ್ವರಿತಗತಿಯಲ್ಲಿ ಬೆಳೆ ವಿಮೆಯನ್ನು ರೈತರಿಗೆ ಪಾವತಿಸಲು ಸಾಧ್ಯವಾಯಿತು ಎಂದರು.

ರಾಜ್ಯ ಸರಕಾರದ 40 ಇಲಾಖೆಗಳ ಅಂಕಿ-ಅಂಶಗಳನ್ನು ಒಂದೆಡೆ ಕ್ರೋಡೀಕರಿಸುವ ಸಲುವಾಗಿ ಕರ್ನಾಟಕ ಮಾಹಿತಿ ಕೇಂದ್ರವನ್ನು ಡಾಟಾ ಬ್ಯಾಂಕ್ ಸ್ಥಾಪಿಸಲಾಗುವುದು ಎಂದ ಅವರು, ಡೇಟಾ ಬ್ಯಾಂಕ್ ನೆರನಿಂದ ಯಾವುದಾದರೂ ಇಲಾಖೆಯ ಅನುದಾನ ಬಳಕೆಯಾಗದಿದ್ದಲ್ಲಿ ಅದನ್ನು ಶಾಲೆಗಳ ಮೂಲಸೌಕರ್ಯ ಅಭಿವೃದ್ದಿ ಮುಂತಾದ ಕೆಲಸಗಳಿಗೆ ಉಪಯೊಗಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೇಂದ್ರ ಸಚಿವ ಸದಾನಂದಗೌಡ ಮಾತನಾಡಿ, ದತ್ತಾಂಶವನ್ನು ನಾವುಗಳು ನಿರ್ವಹಣೆ ಮಾಡಲಾಗದಿದ್ದಲ್ಲಿ ನಾವು ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಆಯಾ ರಾಜ್ಯದ ಸಮಾಜಿಕ-ಅರ್ಥಿಕ ಸ್ಥಿತಿಗತಿಗಳ ನಿರ್ವಹಣೆಗೆ ಪರಿಣಾಮಕಾರಿ ದತ್ತಾಂಶ ನಿರ್ವಹಣೆ ಅತ್ಯಗತ್ಯ ಎಂದು ಹೇಳಿದರು.

ಜನಪ್ರತಿನಿಧಿಗಳು ತಮ್ಮ ಕ್ಷೇತ್ರವಾರು ಸಮೀಕ್ಷೆಗಳನ್ನು ಕೈಗೊಂಡು ಆಗಿರುವ, ಆಗಬೇಕಿರುವ ಯೊಜನೆಗಳು, ಜನರ ಸಮಸ್ಯೆಗಳ ಕುರಿತು ಸಮೀಕ್ಷೆ ನಡೆಸುವಂತಾಗಬೇಕೆಂದರು. ಕೇಂದ್ರ ಸಚಿವ ವಿಜಯ್ ಗೋಯಲ್ ಮಾತನಾಡಿ, ದಿನೇ-ದಿನೇ ಆಡಳಿತ ವ್ಯವಸ್ಥೆಯಲ್ಲಿ ದತ್ತಾಂಶಗಳು ಪ್ರಮುಖ ಪಾತ್ರ ವಹಿಸುತ್ತಿವೆ. ವಿವಿಧ ಇಲಾಖೆಗಳ ದತ್ತಾಂಶ ಶೇಖರಿಸಲು ಡಾಟಾ ವೇರ್ ಹೌಸ್‌ನ್ನು ಕೇಂದ್ರ ಸ್ಥಾಪಿಸಲಿದ್ದು, ಈ ಡಾಟಾ ಬ್ಯಾಂಕ್ ನೀತಿ ನಿರೂಪಕರಿಗೆ, ಯೋಜನಾ ತಜ್ಞರಿಗೆ ಬಹಳ ಉಪಯೋಗವಾಗಲಿದೆ ಎಂದರು.

ಈ ವರ್ಷದ ಸಮ್ಮೇಳನದ ಘೊಷಣೆ ಆಡಳಿತ ಸಂಖ್ಯಾ ಸಂಗ್ರಹಣೆ ಎಂಬುದಾಗಿದ್ದು, ಆಡಳಿತಕ್ಕೆ ಸಂಬಂಧಿಸಿದಂತೆ ಗಣಿ, ಮಾನವ ಸಂಪನ್ಮೂಲ, ಕೈಗಾರಿಕಾ ನೀತಿ, ಭಡ್ತಿ ಮುಂತಾದವುಗಳ ಬಗ್ಗೆ ಈ ಸಮ್ಮೇಳನ ಪರಿಣಾಮಕಾರಿಯಾಗಿ ಬೆಳಕು ಚೆಲ್ಲಲಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಭಾರತೀಯ ಯೋಜನಾ ಮತ್ತು ಸಾಂಖ್ಯಿಕ ಸಂಗ್ರಹಣೆ ಇಲಾಖಾ ಕಾರ್ಯದರ್ಶಿ ಟಿ.ಸಿ.ಎ.ಅನಂತ್, ರಾಜ್ಯದ ಯೋಜನಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News