ಸ್ವಾತಂತ್ರ ಉದ್ಯಾನವನದ ಜಾಗ ಕಬಳಿಸಲು ಹುನ್ನಾರ: ಆರೋಪ

Update: 2018-01-18 15:30 GMT

ಬೆಂಗಳೂರು, ಜ. 18: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆ ನಗರದ ಸ್ವಾತಂತ್ರ ಉದ್ಯಾನದ ಜಾಗವನ್ನು ಕಬಳಿಸಲು ಹುನ್ನಾರ ನಡೆಸಲಾಗುತ್ತಿದೆ ಎಂದು ಸ್ವಾತಂತ್ರ ಉದ್ಯಾನವನ ಹೋರಾಟ ಸಮಿತಿ ಆರೋಪಿಸಿದೆ.

ಸ್ವಾತಂತ್ರ ಉದ್ಯಾನವನದ ಜಾಗ ಕಬಳಿಕೆ ವಿರೋಧಿಸಿ ಜ.26ರ ಗಣರಾಜ್ಯೋತ್ಸವ ದಿನದಂದು ಸ್ವಾತಂತ್ರ ಉದ್ಯಾನವನ ಹೋರಾಟ ಸಮಿತಿ ವತಿಯಿಂದ ಹಿರಿಯ ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.

ದೆಹಲಿಯ ಜಂತರ್-ಮಂತರ್‌ನಂತೆ ಬೆಂಗಳೂರಿನಲ್ಲಿ ಸ್ವಾತಂತ್ರ ಉದ್ಯಾನವನ ಹೋರಾಟಗಾರರ ಕರ್ಮಭೂಮಿಯಾಗಿದೆ. ಜನರಿಗೆ ಅನ್ಯಾಯವಾದಾಗ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಲು ಬೆಂಗಳೂರಿನ ಹೃದಯ ಭಾಗದಲ್ಲಿ ಉಳಿದಿರುವುದು ಸ್ವಾತಂತ್ರ ಉದ್ಯಾವನದ ಜಾಗ ಮಾತ್ರ. ಮೆಜೆಸ್ಟಿಕ್, ವಿಧಾನಸೌಧ ಸೇರಿದಂತೆ ಪ್ರಮುಖ ಕಚೇರಿಗಳಿಗೆ ಇದು ಸನಿಹವಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯ ರೈತರು, ಕನ್ನಡಪರ ಸಂಘಟನೆಗಳು, ದಲಿತರು, ಕಾರ್ಮಿಕರು, ಮಹಿಳಾ ಸಂಘಟನೆಗಳು, ವಿದ್ಯಾರ್ಥಿಗಳು, ಸಾಹಿತಿಗಳು, ಪ್ರಗತಿಪರ ಚಿಂತಕರು, ಹೋರಾಟಗಾರರು ಪ್ರತಿಭಟನೆ ನಡೆಸಲು ಈ ಜಾಗವನ್ನೆ ಅವಲಂಬಿಸಿದ್ದಾರೆ. ಆದರೆ ಈಗ ಹೋರಾಟಗಾರರ ಹಕ್ಕನ್ನು ಮೊಟಕುಗೊಳಿಸಲು ಯತ್ನಿಸಲಾಗುತ್ತಿದೆ. ರಾಜ್ಯ ಪ್ರವಾಸೋದ್ಯಮ ಇಲಾಖೆ ಸ್ವಾತಂತ್ರ ಉದ್ಯಾನವನದ ಜಾಗವನ್ನು ಪ್ರವಾಸಿ ಸ್ಥಳವನ್ನಾಗಿ ಪರಿವರ್ತಿಸುವ ನೆಪದಲ್ಲಿ ಜಾಗ ಕಬಳಿಸಲು ಹುನ್ನಾರ ನಡೆಸಲಾಗುತ್ತಿದೆ. ಇದಕ್ಕೆ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಪರೋಕ್ಷ ಬೆಂಬಲವಿದೆ ಎಂದು ಆರೋಪಿಸಿದ್ದಾರೆ.

ಬೆಂಬಲ: ಗಂಡಸಿ ಸದಾನಂದಸ್ವಾಮಿ ನೇತೃತ್ವದಲ್ಲಿ ‘ಸ್ವಾತಂತ್ರ ಉದ್ಯಾನವನ ಉಳಿಸಿ ಹೋರಾಟ ಸಮಿತಿ’ ರಚಿಸಲಾಗಿದೆ. ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ ಸೇರಿದಂತೆ ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಹೋರಾಟ ಸಮಿತಿಗೆ ಬೆಂಬಲ ಸೂಚಿಸಿವೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News