ಬೀದಿ ವ್ಯಾಪಾರಿಗಳಿಗೆ ಫೆ.21ರೊಳಗೆ ಗುರುತಿನ ಚೀಟಿ ನೀಡಿ: ಬಿಬಿಎಂಪಿಗೆ ಹೈಕೋರ್ಟ್ ಆದೇಶ

Update: 2018-01-18 15:43 GMT

ಬೆಂಗಳೂರು, ಜ.18: ಬೆಂಗಳೂರಿನ ಬೀದಿ ವ್ಯಾಪಾರಿಗಳಿಗೆ 2018ರ ಫೆ.21ರೊಳಗೆ ಗುರುತಿನ ಚೀಟಿ ನೀಡಬೇಕೆಂದು ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶಿಸಿದೆ.

ನಗರದಲ್ಲಿರುವ ಎಲ್ಲ ಬೀದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಿಸುವಂತೆ ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಬಾಬು ಸೇರಿ 14 ಮಂದಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ನಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ಪೀಠ, ಬಿಬಿಎಂಪಿ ಈಗಾಗಲೇ ಗುರುತಿಸಿರುವ ವ್ಯಾಪಾರಿಗಳಿಗೆ 2018ರ ಫೆ.21ರೊಳಗೆ ಗುರುತಿನ ಚೀಟಿ ನೀಡಬೇಕು. ತಪ್ಪಿದರೆ ಈ ಕಾರ್ಯದ ಉಸ್ತುವಾರಿ ಅಧಿಕಾರಿಯು ದಿನಕ್ಕೆ ಒಂದು ಸಾವಿರ ರೂ.ನಂತೆ ವಿಳಂಬಕ್ಕೆ ಬಿಬಿಎಂಪಿ ದಂಡ ಪಾವತಿಸಬೇಕೆಂದು ಆದೇಶದಲ್ಲಿ ಸೂಚಿಸಿದೆ.

ಪ್ರಕರಣವೇನು: ರಾಷ್ಟ್ರೀಯ ನಗರ ಜೀವನೋಪಾಯದಡಿ ಕರ್ನಾಟಕದ ಎಲ್ಲ ನಗರಗಳಲ್ಲಿರುವ ಬೀದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿ ಗುರುತಿನ ಚೀಟಿ ನೀಡಬೇಕು ಎಂದು ಕೇಂದ್ರ ಸರಕಾರವು ಆದೇಶ ಮಾಡಿದೆ. ಆದರೆ, ಬಿಬಿಎಂಪಿ ಅಧಿಕಾರಿಗಳು 2017ರಲ್ಲಿ ಸಮೀಕ್ಷೆ ನಡೆಸಿದ್ದರೂ ಗುರುತಿನ ಚೀಟಿ ನೀಡಿಲ್ಲ. ಹೀಗಾಗಿ, ಈ ಸಂಬಂಧ ಬಿಬಿಎಂಪಿಗೆ ನಿರ್ದೇಶಿಸಬೇಕೆಂದು ಅರ್ಜಿದಾರರು ಕೋರಿದ್ದರು. ಅರ್ಜಿದಾರರ ಪರ ವಕೀಲ ಕ್ಲಿಫ್ಟನ್ ರೋಝಾರಿಯೋ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News