‘ಹಾಲಕ್ಕಿ ಒಕ್ಕಲಿಗ, ಕುಣಬಿ ಸಮುದಾಯ’ವನ್ನು ಎಸ್ಟಿಗೆ ಸೇರಿಸಿ: ಕೇಂದ್ರಕ್ಕೆ ಸಚಿವ ದೇಶಪಾಂಡೆಮನವಿ
ಬೆಂಗಳೂರು, ಜ. 19: ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಹಾಲಕ್ಕಿ ಒಕ್ಕಲಿಗ, ಕುಣಬಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ(ಎಸ್ಟಿ)ದ ಸ್ಥಾನಮಾನ ನೀಡಬೇಕು ಎಂದು ಬೃಹತ್ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಆರ್.ವಿ. ದೇಶಪಾಂಡೆ, ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ.
ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ ಅಧ್ಯಕ್ಷ ನಂದಕುಮಾರ್ ಸಾಮಿ ಮತ್ತು ರಿಜಿಸ್ಟ್ರಾರ್ ಜನರಲ್ ಹಾಗೂ ಭಾರತೀಯ ಜನಗಣತಿ ಆಯುಕ್ತ ಶೈಲೇಶ್ ಅವರಿಗೆ, ಸಚಿವ ದೇಶಪಾಂಡೆ ಪತ್ರ ಬರೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಗುಡ್ಡಗಾಡು ಮತ್ತು ಅರಣ್ಯ ಪ್ರದೇಶಗಳಲ್ಲಿ ವಾಸ ಮಾಡುವ ಹಾಲಕ್ಕಿ ಒಕ್ಕಲಿಗರು ಎಸ್ಟಿ ಸ್ಥಾನಮಾನ ಪಡೆಯಲು ಅರ್ಹರಾಗಿದ್ದು, ಅವರ ಈ ಬೇಡಿಕೆ ನ್ಯಾಯೋಚಿತವಾಗಿದೆ ಎಂದು ವಿವರಿಸಿದ್ದಾರೆ.
ಹಾಲಕ್ಕಿ ಒಕ್ಕಲಿಗರ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡುವಂತೆ ಕೋರಿ ರಾಜ್ಯ ಸರಕಾರವು 2013ರ ಮಾರ್ಚ್‌ನಲ್ಲಿ ಕೇಂದ್ರ ಸರಕಾರಕ್ಕೆ ಶಿಫಾರಸು ಸಲ್ಲಿಸಿತ್ತು. ಆದರೆ, ಕೇಂದ್ರ ಸರಕಾರದ ರಿಜಿಸ್ಟ್ರಾರ್ ಜನರಲ್ ಕಚೇರಿಯು ಇದಕ್ಕೆ ಕೆಲವು ಆಕ್ಷೇಪಣೆಗಳನ್ನೆತ್ತಿ, ಶಿಫಾರಸನ್ನು ರಾಜ್ಯ ಸರಕಾರಕ್ಕೆ ವಾಪಸ್ಸು ಕಳಿಸಿತ್ತು.
ಅನಂತರ ರಾಜ್ಯ ಸರಕಾರವು ಮತ್ತೊಮ್ಮೆ ಹಾಲಕ್ಕಿ ಒಕ್ಕಲಿಗ ಸಮುದಾಯದ ಸಮಗ್ರ ಕುಲಶಾಸ್ತ್ರೀಯ ಅಧ್ಯಯನ ನಡೆಸಿ, 2017ರ ಫೆಬ್ರವರಿಯಲ್ಲಿ ಈ ಶಿಫಾರಸ್ಸನ್ನು ಮತ್ತೊಮ್ಮೆ ಕೇಂದ್ರ ಸರಕಾರಕ್ಕೆ ರವಾನಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಶಿಫಾರಸನ್ನು ಕೇಂದ್ರ ಸರಕಾರ ಈಗಾಗಲೇ ರಿಜಿಸ್ಟ್ರಾರ್ ಜನರಲ್ ಅವರ ಕಚೇರಿಗೆ ಕಳುಹಿಸಿ ಕೊಟ್ಟಿದ್ದು, ಮುಂದಿನ ಅಭಿಪ್ರಾಯವನ್ನು ಕೋರಿದೆ ಎಂದು ದೇಶಪಾಂಡೆ ತಿಳಿಸಿದ್ದಾರೆ.
ಈ ಬೇಡಿಕೆಯನ್ನು ರಿಜಿಸ್ಟ್ರಾರ್ ಜನರಲ್ ಅವರು ಆದ್ಯತೆಯ ಮೇಲೆ ಪರಿಗಣಿಸಿ, ಕೇಂದ್ರ ಸರಕಾರಕ್ಕೆ ತಮ್ಮ ಅಭಿಪ್ರಾಯವನ್ನು ತಿಳಿಸಬೇಕೆಂದು ಸಚಿವರು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದೇ ಉದ್ದೇಶಕ್ಕಾಗಿ ದೇಶಪಾಂಡೆ ಇತ್ತೀಚೆಗೆ ಹಾಲಕ್ಕಿ ಒಕ್ಕಲಿಗ ಸಮುದಾಯದ ಮುಖಂಡ ಹನುಮಂತ ಗೌಡ, ಕೆ.ಎಚ್.ಗೌಡ ಮುಂತಾದವರಿದ್ದ ನಿಯೋಗದೊಂದಿಗೆ ಹೊಸದಿಲ್ಲಿಗೆ ತೆರಳಿದ್ದರು.
ಈ ವೇಳೆ ಕೇಂದ್ರ ಸರಕಾರದ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ, ಹಾಲಕ್ಕಿ ಒಕ್ಕಲಿಗ ಸಮುದಾಯದ ಬೇಡಿಕೆ ಕುರಿತು ಚರ್ಚೆ ನಡೆಸಿದ್ದಾರೆ. ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಜುಅಲ್ ಓರಂ, ಕಾರ್ಯದರ್ಶಿ ಲೀನಾ ನಾಯರ್, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಕಾರ್ಯದರ್ಶಿ ಜಿ.ಲತಾ ಕೃಷ್ಣರಾವ್, ರಾಷ್ಟ್ರೀಯ ಎಸ್ಟಿ ಆಯೋಗದ ಅಧ್ಯಕ್ಷ ನಂದಕುಮಾರ್ ಸಾಮಿ ಮತ್ತು ರಾಷ್ಟ್ರೀಯ ಎಸ್ಟಿ ಆಯೋಗದ ಕಾರ್ಯದರ್ಶಿ ರಾಘವಚಂದ್ರರಿಗೂ ಪತ್ರ ಬರೆದಿದ್ದು, ಸ್ಥಾನಮಾನ ನೀಡುವ ವಿಚಾರವನ್ನು ಆದ್ಯತೆಯ ಮೇಲೆ ಪರಿಗಣಿಸುವಂತೆ ಕೋರಿದ್ದಾರೆ ಎಂದು ತಿಳಿಸಿದ್ದಾರೆ.
ಕುಣಬಿ ಸಮುದಾಯವನ್ನು ಎಸ್ಟಿಗೆ ಸೇರಿಸಿ: ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಕುಣಬಿ ಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರಿಸಬೇಕೆಂದು ಸಚಿವ ಆರ್.ವಿ. ದೇಶಪಾಂಡೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಬೇಕೆಂದು ಕುಣಬಿ ಸಮುದಾಯದ ಮುಖಂಡರು ಹಲವು ವರ್ಷಗಳಿಂದ ಆಗ್ರಹಿಸುತ್ತಿದ್ದಾರೆ. ಅವರ ಈ ಬೇಡಿಕೆಯು ನ್ಯಾಯಸಮ್ಮತ. ಸಚಿವ ಸಂಪುಟ ಸಭೆಯೂ ಈ ಬಗ್ಗೆ ನಿರ್ಧರಿಸಿದೆ. ಗೋವಾದಲ್ಲಿ ಕುಣಬಿಗಳಿಗೆ ಈಗಾಗಲೇ ಎಸ್ಟಿ ಸ್ಥಾನಮಾನ ನೀಡಲಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.