×
Ad

ಹೈಕಮಾಂಡ್‌ಗೆ ಸಚಿವರಿಂದ ಕಪ್ಪ ಕಾಣಿಕೆ: ಎಚ್‌ಡಿಕೆ ಆರೋಪಕ್ಕೆ ಮುಖ್ಯಮಂತ್ರಿ ಆಕ್ರೋಶ

Update: 2018-01-19 19:14 IST

ಬೆಂಗಳೂರು, ಜ.19: ರಾಜ್ಯದ ಪ್ರಭಾವಿ ಸಚಿವರು, ಕಾಂಗ್ರೆಸ್ ನಾಯಕರು ಹೈಕಮಾಂಡ್‌ಗೆ ಕಪ್ಪ ಕಾಣಿಕೆ ಸಲ್ಲಿಸುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ನಾಯಕರು, ಸಚಿವರು ಕಪ್ಪ ಕಾಣಿಕೆ ಸಲ್ಲಿಸಿದ್ದನ್ನು ಕುಮಾರಸ್ವಾಮಿ ನೋಡಿದ್ದಾರಾ? ಇದೊಂದು ರಾಜಕೀಯ ಪ್ರೇರಿತವಾದ ಹೇಳಿಕೆ. ಸರಕಾರದ ಬಗ್ಗೆ ಮಾತನಾಡಲು ಅವರ ಬಳಿ ಏನೂ ಇಲ್ಲ. ಆದುದರಿಂದ, ಇಂತಹ ಸುಳ್ಳು ಮಾತುಗಳನ್ನು ಪದೇ ಪದೇ ಹೇಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ರಾಜ್ಯ ವಿಧಾನಸಭೆಗೆ ಚುನಾವಣೆ ಸದ್ಯದಲ್ಲೆ ಎದುರಾಗಲಿದೆ. ಸರಕಾರದ ಆಡಳಿತ ವೈಫಲ್ಯಗಳ ಕುರಿತು ಮಾತನಾಡಲು ಕುಮಾರಸ್ವಾಮಿ ಬಳಿ ಏನೂ ಇಲ್ಲ. ಆದುದರಿಂದ, ಇಂತಹ ಅಸಂಬದ್ಧ ಹೇಳಿಕೆಗಳನ್ನು ನೀಡಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.

ಕುಮಾರಸ್ವಾಮಿ ಎಷ್ಟು ಪ್ರಯತ್ನ ಪಟ್ಟರೂ ಅವರ ಆಸೆ ಈಡೇರುವುದಿಲ್ಲ. ಮುಂದಿನ ಅವಧಿಗೂ ಜನರ ಆಶೀರ್ವಾದ ಪಡೆದು ನಮ್ಮ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News