×
Ad

ಸರಕಾರಿ ಕಾಲೇಜು, ಕಟ್ಟಡಗಳ ಎದುರು ಕಿರು ಉದ್ಯಾನವಿರಲಿ: ಡಾ.ವೀರೇಂದ್ರ ಹೆಗಡೆ

Update: 2018-01-19 19:57 IST

ಬೆಂಗಳೂರು, ಜ.19: ಬೆಂಗಳೂರಿನಲ್ಲಿ ಪ್ರತಿ ಸರಕಾರಿ ಕಚೇರಿ, ಕಟ್ಟಡಗಳ ಮುಂದೆ ಕಿರು ಉದ್ಯಾನವನಗಳನ್ನು ಕಡ್ಡಾಯಗೊಳಿಸಬೇಕು. ಉದ್ಯಾನನಗರಿಯ ಖ್ಯಾತಿಯನ್ನು ಮರಳಿ ತಂದು ಕೊಡಬೇಕೆಂದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಒತ್ತಾಯಿಸಿದ್ದಾರೆ.

ಗಣರಾಜೋತ್ಸವದ ಅಂಗವಾಗಿ ಶುಕ್ರವಾರದಿಂದ ನಗರದ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಹಮ್ಮಿಕೊಂಡಿರುವ 207ನೆ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ಸಾಮಾನ್ಯವಾಗಿ ಆಹಾರ, ವಸತಿಗೆ ಒತ್ತು ನೀಡುತ್ತಾನೆ. ನಾವು ತಿನ್ನುವ ಆಹಾರ ಕರಗಿ ಹೋಗುತ್ತದೆ. ಆದರೆ, ಪ್ರಕೃತಿ ಕಣ್ಣಿಗೆ ನೀಡುವ ಆನಂದ ಶಾಶ್ವತವಾದದ್ದು. ಅದು ಎಂದಿಗೂ ಮಾಯವಾಗುವುದಿಲ್ಲ ಎಂದು ಹೇಳಿದರು.

ಬೆಂಗಳೂರು ಎಂದರೆ ಕೇವಲ ಬಾರ್‌ಗಳು, ಬಿಲ್ಡಿಂಗ್‌ಗಳು ನೆನಪಾಗಬಾರದು. ಉದ್ಯಾನವನಗಳ ಮೂಲಕ ಇದು ಪುಷ್ಪ ನಗರಿ ಆಗಿತ್ತು. ಅಂತಹ ವೈಭವವನ್ನು ಮರುಸೃಷ್ಟಿಸಲು ಸರಕಾರ ಮುಂದಾಗಬೇಕು ಎಂದು ಅವರು ಹೇಳಿದರು.

ಬೆಂಗಳೂರಿಗೆ ಬಂದವರು ಲಾಲ್‌ಬಾಗ್ ಹಾಗೂ ಕಬ್ಬನ್ ಪಾರ್ಕ್ ನೋಡದಿದ್ದರೆ ಜೀವನ ವ್ಯರ್ಥ ಎಂಬ ಮಾತಿದೆ. ಸರಕಾರ ಮತ್ತು ತೋಟಗಾರಿಕೆ ಇಲಾಖೆ ಈ ಸ್ಥಳಗಳನ್ನು ಸುರಕ್ಷಿತವಾಗಿ ಕಾಪಾಡಿಕೊಂಡು ಬಂದಿವೆ. ತೋಟಗಾರಿಕೆ ಪಿತಾಮಹ ಡಾ. ಎಂ.ಎಚ್.ಮರಿಗೌಡರಿಂದ ಸಸ್ಯಕಾಶಿ ಲಾಲ್‌ಬಾಗ್ ಮನೆಮಾತಾಗಿದೆ. ಪರಿಸರ ಉಳಿಸುವ ಬಗ್ಗೆ ಮತ್ತಷ್ಟು ಅರಿವು ಮೂಡಿಸಬೇಕಿದೆ ಎಂದು ಹೇಳಿದರು.

ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಜಗತ್ತು ದಳ್ಳುರಿ ಮೇಲೆ ನಿಂತ ಸಂದರ್ಭದಲ್ಲಿ ಪ್ರದರ್ಶನ ಪ್ರಸ್ತುತವಾಗಿದೆ. ಇಂತಹ ಅವಘಡಗಳ ಸ್ಥಿತಿಯಲ್ಲಿ ಜಗತ್ತನ್ನು ಗೆಲ್ಲಲು ತ್ಯಾಗದಿಂದ ಮಾತ್ರವೇ ಸಾಧ್ಯವಾಗಲಿದೆ ಎಂದು ಹೇಳಿದರು.

ನಾಡೋಜ ಡಾ. ಹಂಪ ನಾಗರಾಜಯ್ಯ ಮಾತನಾಡಿ, ಮುಂದಿನ ಫೆಬ್ರವರಿಯಲ್ಲಿ ಶ್ರವಣಬೆಳಗೊಳದಲ್ಲಿ ವಿಶ್ವವಿಖ್ಯಾತ 58 ಅಡಿ ಎತ್ತರದ ಬಾಹುಬಲಿಯ ಮಹಾ ಮಸ್ತಕಾಭಿಷೇಕ ನಡೆಯಲು ಕ್ಷಣಗಣನೆ ಆರಂಭವಾಗಿದೆ. ಅದಕ್ಕೂ ಮೊದಲೇ ಲಾಲ್‌ಬಾಗ್‌ನಲ್ಲಿ ಅದರ ವೈಭವವನ್ನು ತೆರೆದಿಟ್ಟಿರುವುದು ಶ್ಲಾಘನೀಯ ಎಂದು ಹೇಳಿದರು.

ಗಮನ ಸೆಳೆದ ಬಾಹುಬಲಿ: ಪುಷ್ಪ ಪ್ರದರ್ಶನದಲ್ಲಿ ಬಾಹುಬಲಿ ಕುರಿತ ಪ್ರದರ್ಶನ ಜೊತೆಗೆ ಹೂ ತೋಟಗಳು, ತರಕಾರಿ ತೋಟ, ತಾರಸಿ ತೋಟ, ಉದ್ಯಾನವನ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಜೊತೆಗೆ ತರಕಾರಿ ಕೆತ್ತನೆ, ಡಚ್ ಹೂವಿನ ಜೋಡಣೆ, ಒಣ ಹೂವಿನ ಜೋಡಣೆ, ಥಾಯ್ ಆರ್ಟ್, ಜಾನೂರು ಮತ್ತು ಕುಬ್ಜ ಮರಗಳ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯುತ್ತಿದ್ದವು.

ನೂರಕ್ಕೂ ಅಧಿಕ ಬಗೆಯ ವೈವಿಧ್ಯಮಯ ವಾರ್ಷಿಕ ಹೂಗಳಿಂದ ಕೂಡಿದ ಈ ಪ್ರದರ್ಶನದಲ್ಲಿ ವಿಶೇಷವಾಗಿ ಹೂಬಿಡುವ ಆಕರ್ಷಕ ಅಂಥೋರಿಯಂ, ಆರ್ಕಿಡ್ಸ್, ವಿಂಕಾ, ಬೋಗನ್ವಿಲ್ಲಾ, ಇಂಪೇಷನ್ಸ್, ಲಿಲ್ಲಿ, ಅಗಾಪಾಂಥಸ್, ಹೆಲಿಕೋನಿಯಾ, ಎಗೋನಿಯಾ, ಕಾರ್ನೇಷನ್, ಗುಲಾಬಿ, ಸ್ಕೈಲೊಮನ್, ಪೆಟೂನಿಯಾ, ಪಾಯಿನ್ ಸೆಟಿಯಾ ಹೂ ಗಿಡಗಳನ್ನು ಪ್ರದರ್ಶಿಸಲಾಗುತ್ತಿದೆ.

ಕಾರ್ಯಕ್ರಮದಲ್ಲಿ ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ, ಶಾಸಕರಾದ ರಾಜೇಶ್, ನಾರಾಯಣಸ್ವಾಮಿ, ಮೇಯರ್ ಆರ್.ಸಂಪತ್‌ರಾಜ್, ತೋಟಗಾರಿಕೆ ಇಲಾಖೆ ಆಯುಕ್ತ ಎಸ್.ಎಸ್. ಪಾಟೀಲ್, ಮೈಸೂರು ಉದ್ಯಾನ ಕಲಾ ಸಂಘದ ಉಪಾಧ್ಯಕ್ಷ ಬಿ.ಆರ್.ವಾಸುದೇವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News