ಕೃಷಿ ಉತ್ತೇಜಿಸಲು ಸೂಕ್ತ ಮಾರ್ಗೋಪಾಯ ಅತ್ಯಗತ್ಯ: ವೆಂಕಯ್ಯ ನಾಯ್ಡು

Update: 2018-01-19 15:06 GMT

ಬೆಂಗಳೂರು, ಜ. 19: ಹವಾಮಾನ ವೈಪರೀತ್ಯ, ಮಾರುಕಟ್ಟೆ ಬೆಲೆ ಏರಿಳಿಕೆ, ನಗರ ಪ್ರದೇಶ ವಲಸೆಯಿಂದಾಗಿ ಕೃಷಿ ಕ್ಷೇತ್ರವಿಂದು ಹಲವು ಗಂಭೀರ ಸವಾಲುಗಳನ್ನು ಎದುರಿಸುತ್ತಿದ್ದು, ಭಾರತದ ಆರ್ಥಿಕತೆಯ ಜೀವನಾಡಿ ಎನಿಸಿರುವ ಕೃಷಿಯನ್ನು ಉತ್ತೇಜಿಸಿ-ಬೆಳೆಸಲು ಸೂಕ್ತ ಮಾರ್ಗೋಪಾಯಗಳ ಅವಶ್ಯಕತೆ ಇದೆ ಎಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನಾ ಕೇಂದ್ರ (ಐಎಸ್‌ಇಸಿ) ಡಾ.ವಿ.ಕೆ.ಆರ್.ವಿ.ರಾವ್ ಅವರ ಸ್ಮರಣಾರ್ಥ ಏರ್ಪಡಿಸಿದ್ದ 47ನೆ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಶೇ.52 ರಷ್ಟು ಜನರು ಕೃಷಿಯನ್ನೇ ಅವಲಂಭಿಸಿದ್ದಾರೆ. ಕೃಷಿ ಕ್ಷೇತ್ರವನ್ನು ಲಾಭದಾಯಕ ಕ್ಷೇತ್ರವನ್ನಾಗಿ ಪರಿವರ್ತಿಸಿ, ಯುವ ಜನಾಂಗವನ್ನು ಆಕರ್ಷಿಸುವುದು ಪ್ರಸ್ತುತ ದಿನಗಳಲ್ಲಿ ಅತೀ ಅವಶ್ಯಕ ಎಂದರು.

ಕೃಷಿಕರು, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ, ರೇಷ್ಮೆ ಮುಂತಾದ ಉಪ ಕಸಬುಗಳನ್ನು ಸಂಪ್ರದಾಯಿಕ ಕೃಷಿ ಜೊತೆಗೆ ಅಳವಡಿಸಿಕೊಂಡಲ್ಲಿ ಉತ್ತಮ ಲಾಭವನ್ನು ಕಂಡು ಕೊಳ್ಳಬಹುದಾಗಿದೆ ಮತ್ತು ಇದರಿಂದ ರೈತರ ಆತ್ಮಹತ್ಯೆ ಪ್ರಕರಣಗಳು ಇಳಿಮುಖಗೊಳ್ಳಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಗುಣಮಟ್ಟದ ಬೀಜಗಳ ಬಳಕೆಯಿಂದಾಗಿ ಶೇ.20ಕ್ಕೂ ಅಧಿಕ ಇಳುವರಿಯನ್ನು ರೈತರು ಪಡೆಯಬಹುದಾಗಿದ್ದು, ಸಮತೋಲಿತ ರಾಸಾಯನಿಕ ಮತ್ತು ಸಾವಯವ ಗೊಬ್ಬರಗಳ ಬಳಕೆ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಲಿದೆ ಎಂದ ಅವರು, ಭೂಮಿಯ ಫಲವತ್ತತೆಯ ಪರೀಕ್ಷೆಯನ್ನು ಕಾಲಕಾಲಕ್ಕೆ ಕೈಗೊಳ್ಳುವ ಹಾಗೂ ಸೂಕ್ತ ಪ್ರಮಾಣದ ರಾಸಾಯನಿಕ ಗೊಬ್ಬರಗಳ ಬಳಕೆ ಕುರಿತು ಕೃಷಿಕರಿಗೆ ತಿಳುವಳಿಕೆ ಮೂಡಿಸುವ ಕೆಲಸವನ್ನು ಕೃಷಿ ವಿವಿಗಳು ಮತ್ತು ಸಂಶೋಧನಾ ಕೇಂದ್ರಗಳು ಮಾಡಬೇಕಿದೆ ಎಂದರು.

ಬಹುಬೇಗ ಹಾಳಾಗುವ ಆಹಾರ ಪದಾರ್ಥಗಳನ್ನು ಕೆಡದಂತೆ ಸಂಸ್ಕರಿಸಿ ಕಾಪಾಡಿಕೊಳ್ಳುವ ಮೂಲಕ ಮತ್ತು ನಂತರದ ದಿನಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಮಾಡುವ ಮೂಲಕ ರೈತರು ಉತ್ತಮ ಲಾಭಾಂಶವನ್ನು ಪಡೆಯಬಹುದಾಗಿದ್ದು, ಬ್ರಾಂಡೆಂಡ್ ಆಹಾರ ಪದಾರ್ಥಗಳಿಗೆ ಹೆಚ್ಚಿನ ಬೆಲೆ ಮತ್ತು ರೈತನು ಬೆಳೆದ ಬೆಳೆಗೆ ಕಡಿಮೆ ದರ ದೊರಕುತ್ತಿರುವುದು ವಿಷಾದನೀಯ ಎಂದರು.

ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಯಂತ್ರೋಪಕರಣಗಳ ಬಳಕೆ ಮತ್ತು ಸಮತೋಲಿತ ನೀರಿನ ಬಳಕೆ ಸಹ ಹೆಚ್ಚಿನ ಉತ್ಪಾದನೆಯನ್ನು ರೈತರಿಗೆ ಒದಗಿಸುವುದು ಎಂದ ಅವರು, ಶೇ.70ರಷ್ಟು ಕೃಷಿ ನೀರಾವರಿಯನ್ನು ಅವಲಂಭಿಸಿದ್ದು, ಹನಿ ನೀರಾವರಿ ಪದ್ಧತಿಯತ್ತ ರೈತರು ಹೆಚ್ಚಿನ ಗಮನಹರಿಸಬೇಕು ಎಂದರು.

ದೇಶದ ಜನಸಂಖ್ಯೆ ಹೆಚ್ಚಿದಂತೆ ಭೂಮಿಯ ವಿಸ್ತೀರ್ಣ ಹೆಚ್ಚುವುದಿಲ್ಲ. ಇದನ್ನು ಅರಿತು ನಾವು ಜನಸಂಖ್ಯೆ ನಿಯಂತ್ರಣದತ್ತ ಗಮನಹರಿಸಬಹುದಾಗಿದೆ ಎಂದ ಅವರು, ಕೃಷಿ ಕ್ಷೇತ್ರದ ಮೇಲೆ ಸಾರ್ವಜನಿಕ ಮತ್ತು ಖಾಸಗಿ ಬಂಡವಾಳವೂ ಹೆಚ್ಚು ಹೆಚ್ಚು ಹರಿದು ಬರುವಂತಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಜ್ಯಪಾಲ ವಜುಭಾಯಿ ವಾಲಾ ಮಾತನಾಡಿ, ಸಮುದ್ರಕ್ಕೆ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ತಡೆದು ಅವಶ್ಯವಿರುವ ಬರಪೀಡಿತ ಪ್ರದೇಶಗಳಿಗೆ ಅಂತಹ ನೀರನ್ನು ಹರಿಸಿದಲ್ಲಿ ಕೃಷಿ ಕ್ಷೇತ್ರ ಹೆಚ್ಚು ಉತ್ತೇಜನಗೊಳ್ಳಲಿದೆ. ಕೃಷಿ ವಿಶ್ವ ವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಸಿಹಿ ನೀರು ಮತ್ತು ಉಪ್ಪು ನೀರಿನಲ್ಲಿ ಬೆಳೆಯಬಹುದಾದ ಬೆಳೆಗಳು, ಅಲ್ಪ ಪ್ರಮಾಣ, ಮಧ್ಯಮ ಪ್ರಮಾಣ ಮತ್ತು ಅಧಿಕ ನೀರಿನಲ್ಲಿ ಬೆಳೆಯಬಹುದಾದ ಬೆಳೆಗಳ ಕುರಿತು ರೈತರಿಗೆ ಮಾಹಿತಿಯನ್ನು ಹಳ್ಳಿ ಹಳ್ಳಿಗೆ ತೆರಳಿ ಮನಮುಟ್ಟುವಂತೆ ತಿಳಿಯಪಡಿಸಬೇಕು ಎಂದು ಸೂಚಿಸಿದರು.

ಪಶುಸಂಗೋಪನೆ ಉತ್ತಮ ಲಾಭವನ್ನು ತಂದುಕೊಡಲಿದ್ದು ಎಲ್ಲ ಗ್ರಾಮದಲ್ಲಿ ಕೃಷಿ ಜೊತೆ ಹೈನುಗಾರಿಕೆಯನ್ನು ಉತ್ತೇಜಿಸುವಂತಾಗಬೇಕು ಮತ್ತು ಐಸೆಕ್‌ನಂತಹ ಸಂಸ್ಥೆ ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ಅವರು, ಅಮುಲ್ ಡೈರಿಗಿಂತಲೂ ಉತ್ತಮ ಡೈರಿ ದಕ್ಷಿಣ ಭಾರತದಲ್ಲಿ ಹುಟ್ಟುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ಇಂದಿನ ಯುವ ಜನಾಂಗ ನಗರ ಪ್ರದೇಶದತ್ತ ಹೆಚ್ಚು ಆಕರ್ಷಣೆಗೆ ಒಳಗಾಗುತ್ತಿರುವುದನ್ನು ನಾವಿಂದು ಕಾಣಬಹುದಾಗಿದ್ದು, ಇದು ನಿಲ್ಲಬೇಕಾದಲ್ಲಿ ಗ್ರಾಮೀಣ ಪ್ರದೇಶಗಳಿಗೆ ಉತ್ತಮ ರಸ್ತೆ, ಉತ್ತಮ ಶಿಕ್ಷಣ ಸಂಸ್ಥೆಗಳು. ಔದ್ಯೋಗಿಕ ಅವಕಾಶಗಳು, ಇಂಟರ್‌ನೆಟ್ ಮುಂತಾದ ಮೂಲ ಸೌಲಭ್ಯಗಳು ಯುವ ಜನಾಂಗಕ್ಕೆ ದೊರಕಬೇಕು ಎಂದರು.

ಕೇಂದ್ರ ಸಚಿವ ಅನಂತಕುಮಾರ್ ಮಾತನಾಡಿ, ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಸ್ವಚ್ಛಾಗೃಹ ಮತ್ತು ಸಸ್ಯಾಗೃಹ ಇಂದಿನ ಜನಾಂದೋಲನವಾಗಬೇಕಿದೆ ಎಂದರು. ಸಾಮಾಜಿಕ ಪರಿವರ್ತನೆ ಇಲ್ಲದೆ ಆರ್ಥಿಕ ಬದಲಾವಣೆ ಸಾಧ್ಯವಿಲ್ಲ. ಅಂತೆಯೇ ಆರ್ಥಿಕ ಪರಿವರ್ತನೆ ಇಲ್ಲದೆ ಸಾಮಾಜಿಕ ಬದಲಾವಣೆ ಅಸಾಧ್ಯ. ಇದನ್ನು ಅರಿತ ಪ್ರೊ.ವಿ.ಕೆ.ಆರ್.ವಿ.ರಾವ್ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಗಾಗಿ ಅಂದಿನ ದಿನಗಳಲ್ಲೇ ಸಾಕಷ್ಟು ಪರಿಶ್ರಮಪಟ್ಟಿದ್ದರು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಎ.ರವೀಂದ್ರ, ನಿರ್ದೇಶಕ ಡಾ.ಎಂ.ಜಿ. ಚಂದ್ರಕಾಂತ್ ಮತ್ತು ರಿಜಿಸ್ಟ್ರಾರ್ ಡಾ.ಪಿ.ಎಸ್.ಶ್ರೀನಾಥ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News