ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘನೆ: ಸ್ಪೀಕರ್‌ಗೆ ಜೆಡಿಎಸ್ ದೂರು
ಬೆಂಗಳೂರು, ಜ. 19: ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆ ಅಂಗೀಕಾರಕ್ಕೆ ಮೊದಲೇ ಬಿಜೆಪಿ ಸೇರ್ಪಡೆಯಾದ ಡಾ.ಶಿವರಾಜ್ ಪಾಟೀಲ್ ಹಾಗೂ ಮಾನಪ್ಪ ವಜ್ಜಲ್ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಕ್ರಮ ಕೈಗೊಳ್ಳಲು ಕೋರಿ ಸ್ಪೀಕರ್ ಕೋಳಿವಾಡ ಅವರಿಗೆ ದೂರು ನೀಡಲಾಗುವುದು ಎಂದು ಜೆಡಿಎಸ್ ಮುಖಂಡ ಶರವಣ ತಿಳಿಸಿದ್ದಾರೆ.
ಶುಕ್ರವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಶಿವರಾಜ್ ಪಾಟೀಲ್ ಹಾಗೂ ಮಾನಪ್ಪ ವಜ್ಜಲ್ ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಅಸಿಂಧುವಾಗಿದೆ. ಸ್ಪೀಕರ್ ಬದಲು ವಿಧಾನಸಭಾ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದು, ಅದು ಇನ್ನೂ ಅಂಗೀಕಾರವಾಗಿಲ್ಲ. ಈ ಮಧ್ಯೆಯೇ ಶಾಸಕರಿಬ್ಬರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದು ಪಕ್ಷಾಂತರ ನಿಷೇಧ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಹೀಗಾಗಿ ಇಬ್ಬರ ಶಾಸಕ ಸ್ಥಾನವನ್ನು ಅನರ್ಹಗೊಳಿಸಬೇಕು. ಅಲ್ಲದೆ, ಐದು ವರ್ಷಗಳ ಕಾಲ ಚುನಾವಣಾಗೆ ಸ್ಪರ್ಧಿಸದಂತೆ ನಿಷೇಧ ಹೇರಬೇಕು ಎಂದು ವಿಧಾನಸಭಾ ಸ್ಪೀಕರ್ ಕೋಳಿವಾಡ ಅವರಿಗೆ ಹಾಗೂ ಮುಖ್ಯ ಚುನಾವಣಾಧಿಕಾರಿಗಳಿಗೆ ಜೆಡಿಎಸ್ ದೂರು ನೀಡಲಿದೆ ಎಂದು ಹೇಳಿದರು.
ಆರು ತಿಂಗಳಿನಿಂದ ಈ ಇಬ್ಬರೂ ಶಾಸಕರು ಪಕ್ಷದ ಯಾವುದೇ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದೆ ನಿರ್ಲಕ್ಷ್ಯ ಮಾಡಿದ್ದರು. ಈಗ ಏಕಾಏಕಿ ಪಕ್ಷ ತೊರೆದು ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಅವರಿಗೆ ಮುಂದಿನ ಚುನಾವಣೆಯಲ್ಲಿ ಜನತೆ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ಸಿಎಂ ವಿರುದ್ಧ ಸ್ಪರ್ಧೆ: ಪಕ್ಷದ ರಾಷ್ಟ್ರೀಯಾಧ್ಯಕ್ಷ ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮೈಸೂರಿನ ವರುಣಾ ಕ್ಷೇತ್ರ ಸೇರಿದಂತೆ ರಾಜ್ಯದ ಯಾವುದೇ ಕ್ಷೇತ್ರದ ಟಿಕೆಟ್ ನೀಡಿದರೂ ಸ್ಪರ್ಧೆಗೆ ತಾನು ಸಿದ್ದ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟಿಕೆಟ್ ಕೊಟ್ಟರೂ ಸ್ಪರ್ಧಿಸುತ್ತೇನೆ ಎಂದು ಶರವಣ ಹೇಳಿದರು.