ಸೇವಾ ಭದ್ರತೆಗೆ ಆಗ್ರಹ: ಹೊರಗುತ್ತಿಗೆ ಹಾಸ್ಟೆಲ್ ನೌಕರರ ಧರಣಿ 2 ನೆ ದಿನಕ್ಕೆ

Update: 2018-01-19 15:15 GMT

ಬೆಂಗಳೂರು, ಜ.19: ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಹಾಸ್ಟೆಲ್ ಹೊರ ಗುತ್ತಿಗೆದಾರರು ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಎರಡನೇ ದಿನಕ್ಕೆ ಮುಂದುವರಿದಿದೆ.

ನೇರ ನೇಮಕಾತಿ ಕ್ರಮದಿಂದಾಗಿ ಕೆಲಸ ಕಳೆದುಕೊಳ್ಳುವ ಆತಂಕಕ್ಕೆ ಒಳಗಾಗಿರುವ ವಿದ್ಯಾರ್ಥಿ ನಿಲಯಗಳ ಎಲ್ಲ ಡಿ ವರ್ಗದ ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ, ಇಲಾಖೆಯಿಂದಲೇ ವೇತನ ಪಾವತಿ, ಏಕರೂಪದ ಸೇವಾ ನಿಯಮಾವಳಿ ಹಾಗೂ ಕಾರ್ಮಿಕ ಕಾನೂನುಗಳನ್ನು ಜಾರಿ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿ ಧರಣಿ ಮುಂದುವರಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳು ನಡೆಸುತ್ತಿರುವ ವಿದ್ಯಾರ್ಥಿ ನಿಲಯಗಳಲ್ಲಿ ಮತ್ತು ವಸತಿ ಶಾಲಾ-ಕಾಲೇಜುಗಳಲ್ಲಿ ಕಳೆದ ಹತ್ತಾರು ವರ್ಷಗಳಿಂದ ಅಡುಗೆ, ಸ್ವಚ್ಛತೆ, ಕಾವಲು ಕಾಯುವುದು ಸೇರಿದಂತೆ ಹಲವು ಕೆಲಸಗಳನ್ನು ಹೊರಗುತ್ತಿಗೆ ಆಧಾರದಲ್ಲಿ ಮಾಡುತ್ತಾ ಬಂದಿರುವ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವರ್ಗಗಳ ನೌಕರರನ್ನು ಖಾಯಂ ಮಾಡಿ, ಗುತ್ತಿಗೆ ಪದ್ಧತಿಯಿಂದ ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಇತ್ತೀಚಿಗೆ ರಾಜ್ಯ ಸರಕಾರ ಡಿ ವರ್ಗದ ಏಳು ಸಾವಿರ ಹುದ್ದೆಗಳಿಗೆ ನೇರ ನೇಮಕಾತಿಯ ಮೂಲಕ ಎಸೆಸೆಲ್ಸಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ನೇಮಕ ಮಾಡಲು ಮುಂದಾಗಿದೆ. ಈ ಪ್ರಕ್ರಿಯೆಯಿಂದ ಪ್ರಸ್ತುತ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಹೊರಗುತ್ತಿಗೆ ನೌಕರರು ಕೆಲಸ ಕಳೆದುಕೊಳ್ಳುವ ಅಪಾಯದ ಸ್ಥಿತಿಯಲ್ಲಿದ್ದಾರೆ. ಇದನ್ನು ಖಂಡಿಸಿ ಹಲವಾರು ಬಾರಿ ಸರಕಾರಕ್ಕೆ ಮನವಿ ಸಲ್ಲಿಸಿದ್ದರೂ ಏನೂ ಪ್ರಯೋಜನವಾಗಿಲ್ಲ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆದ ಸಂದರ್ಭದಲ್ಲಿ ನೇಮಕಾತಿ ನಿಯಮಗಳನ್ನು ಸೂಕ್ತವಾಗಿ ತಿದ್ದುಪಡಿ ಮಾಡಿ ಹೊರಗುತ್ತಿಗೆ ನೌಕರರ ಸೇವೆ ಖಾಯಂ ಮಾಡುವುದನ್ನು ಪರಿಶೀಲನೆ ಮಾಡುವುದು. ಅಥವಾ ಹಾಲಿ ಹೊರಗುತ್ತಿಗೆ ನೌಕರರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ನಿವೃತ್ತಿ ವಯಸ್ಸು ತಲುಪವವರೆಗೂ ಸೇವಾ ಭದ್ರತೆ ನೀಡುವುದು. ಸಮಾನ ಕೆಲಸಕ್ಕೆ ಸಮಾನ ವೇತನ, ಇಲಾಖೆಯಿಂದಲೇ ವೇತನ ಹಾಗೂ ಏಕರೂಪಿ ಸೇವಾ ನಿಯಮಾವಳಿಗಳನ್ನು ಅಂತಿಮಗೊಳಿಸಿ ಜಾರಿ ಮಾಡುವ ಕುರಿತು ಭರವಸೆ ನೀಡಲಾಗಿತ್ತು.

ಆದರೆ, ಅಧಿಕಾರಿಗಳು ನೀಡಿದ ಭರವಸೆಯನ್ನು ಈಡೇರಿಸುವುದರ ಬದಲಿಗೆ ಹಿಂದೆ ನೇರ ನೇಮಕಾತಿಯಲ್ಲಿ ಆಯ್ಕೆಯಾದವರಿಗೆ ಜ.22 ರಂದು ನಗರದ ಅರಮನೆ ಮೈದಾನದಲ್ಲಿ ನೇಮಕಾತಿ ಆದೇಶ ನೀಡಲು ಮುಂದಾಗಿದ್ದಾರೆ. ಇದರಿಂದಾಗಿ ಹೊರಗುತ್ತಿಗೆ ನೌಕರರಲ್ಲಿ ತೀವ್ರ ಆಘಾತ ಉಂಟು ಮಾಡಿದ್ದು, ಯಾರನ್ನು ಎಲ್ಲಿ ಕೆಲಸದಿಂದ ತೆಗೆದು ಹಾಕಲಾಗುತ್ತದೆ ಎಂಬ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ವಿಫಲವಾದ ಸಭೆ: ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೋರಾಟನಿರತ ನೌಕರರ ಮುಖಂಡರನ್ನು ವಿಧಾನಸೌಧಕ್ಕೆ ಕರೆಯಿಸಿ ಮಾತುಕತೆ ಮಾಡಿದರು. ಆದರೆ, ನೌಕರರ ಸೇವಾ ಭದ್ರತೆ ನೀಡುವ ಸಂಬಂಧ ಸ್ವಷ್ಟವಾದ ನಿರ್ಧಾರ ಪ್ರಕಟಿಸಲಿಲ್ಲ ಹಾಗೂ ಕೇವಲ 10 ವರ್ಷ ಸೇವೆ ಸಲ್ಲಿಸಿರುವ ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆಯುವುದಿಲ್ಲ ಎಂದು ಹೇಳಿದ್ದಾರೆ. ಸಚಿವರ ಹೇಳಿಕೆಯಿಂದ ಸಮಾಧಾನಗೊಳ್ಳದ ಹಾಸ್ಟೆಲ್ ಹೊರಗುತ್ತಿಗೆ ನೌಕರರು ಧರಣಿ ಮುಂದುವರಿಸಿದ್ದಾರೆ.

ಪ್ರತಿಭಟನಾ ಧರಣಿಗೆ ಸಿಐಟಿಯು ಮುಖಂಡರಾದ ವರಲಕ್ಷ್ಮಿ, ಕೆ.ಎನ್.ಉಮೇಶ್, ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್.ವಿಮಲಾ, ಬಿಸಿಯೂಟ ನೌಕರರ ಸಂಘಟನೆ ಕಾರ್ಯದರ್ಶಿ ಮಾಲಿನಿ ಮೇಸ್ತಾ, ಎಸ್‌ಎಫ್‌ಐ ಮುಖಂಡರಾದ ಅಂಬರೀಶ್ ಹಾಗೂ ಗುರುರಾಜ್ ದೇಸಾಯಿ, ಡಿವೈಎಫ್‌ಐ ಮುಖಂಡರಾದ ಬಸವರಾಜ್‌ಪೂಜಾರ್ ಸೇರಿದಂತೆ ಹಲವು ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News