ವೇಶ್ಯಾವಾಟಿಕೆ ದಂಧೆ: ಮೂವರ ಬಂಧನ
ಬೆಂಗಳೂರು, ಜ.19: ಯುವತಿಯರಿಗೆ ಉದ್ಯೋಗದ ಆಮಿಷವೊಡ್ಡಿ ಹೊರ ರಾಜ್ಯದಿಂದ ನಗರಕ್ಕೆ ಕರೆತಂದು ವೇಶ್ಯಾವಾಟಿಕೆಗೆ ದೂಡುತ್ತಿದ್ದ ಆರೋಪದ ಮೇಲೆ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ನಗರದ ನಿವಾಸಿಗಳಾದ ಶಾಹಿದ್ ಶೇಕ್(29), ಆಲಿ(32) ಮತ್ತು ಸಲೀಂ ಶೇಕ್(25) ಬಂಧಿತರು ಎಂದು ತಿಳಿದುಬಂದಿದೆ.
ಚಿಕ್ಕಬಾನಸವಾಡಿ ಕೆರೆಗುಡ್ಡದಹಳ್ಳಿ ಅಬ್ಬಿಗೆರೆ ರಸ್ತೆಯಲ್ಲಿರುವ ಡಿಎಸ್ ಮ್ಯಾಕ್ಸ್, ಸ್ಪೆಂಡರ್ ಅಪಾರ್ಟ್‌ಮೆಂಟ್, ಬಿ ಬ್ಲಾಕ್ 1ನೆ ಮಹಡಿಯಲ್ಲಿ ಸ್ಥಳೀಯ ಮತ್ತು ಪಶ್ಚಿಮ ಬಂಗಾಳ ಮೂಲದವರು ವಾಸವಾಗಿದ್ದಾರೆ. ಇವರು ತಮ್ಮ ಸಂಪರ್ಕ ಜಾಲದ ಮೂಲಕ ಹೊರರಾಜ್ಯದಿಂದ ಅಮಾಯಕ ಹೆಣ್ಣು ಮಕ್ಕಳನ್ನು ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ನಗರಕ್ಕೆ ಕರೆತಂದು ಮನೆಯೊಂದರಲ್ಲಿ ಕೂಡಿ ಹಾಕಿ ಅನೈತಿಕ ಚಟುವಟಿಕೆಗಳಿಗೆ ದೂಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದರು ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು, ಮನೆ ಮೇಲೆ ದಾಳಿ ನಡೆಸಿ ಮೂವರನ್ನು ಬಂಧಿಸಿ 6 ಮೊಬೈಲ್, 5 ಎಟಿಎಂ ಕಾರ್ಡ್, 2,150 ನಗದು ರೂ. ಹಣ ವಶಪಡಿಸಿಕೊಂಡು ಇಲ್ಲಿನ ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.