×
Ad

ಬಾಕಿ ಬಿಲ್ ಪಾವತಿಗೆ ಒತ್ತಾಯ: ಬಿಬಿಎಂಪಿ ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ

Update: 2018-01-19 21:09 IST

ಬೆಂಗಳೂರು, ಜ.19: ಗುತ್ತಿಗೆದಾರರಿಗೆ ಬಾಕಿಯಿರುವ 1,350 ಕೋಟಿ ರೂ. ಮೊತ್ತದ ಬಾಕಿ ಬಿಲ್ ಪಾವತಿಸುವಂತೆ ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರ ಸಂಘ ಒತ್ತಾಯಿಸಿದೆ.

ಶುಕ್ರವಾರ ಗುತ್ತಿಗೆದಾರರಿಗೆ ಬಾಕಿಯಿರುವ 1,350 ಕೋಟಿ ರೂ. ಮೊತ್ತದ ಬಾಕಿ ಬಿಲ್ ಪಾವತಿಸುವಂತೆ ಒತ್ತಾಯಿಸಿ ನಗರದ ಬಿಬಿಎಂಪಿ ಕೇಂದ್ರ ಕಚೇರಿಯ ಮುಂಭಾಗ ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರ ಸಂಘದ ಸದಸ್ಯರು ತಮಟೆ ಬಡಿದು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಕೆ.ಟಿ.ಮಂಜುನಾಥ್ ಮಾತನಾಡಿ, ಪಾಲಿಕೆಯ ಅಧಿಕಾರಿಗಳು 21 ತಿಂಗಳುಗಳಿಂದ ಸಾವಿರಾರು ಕೋಟಿ ರೂ. ಮೊತ್ತದ ಬಿಲ್ ಪಾವತಿಸಲು ಹಿಂದೇಟು ಹಾಕುತ್ತಿದ್ದು, ಬಾಕಿ ಬಿಲ್ ಪಾವತಿಸುವಂತೆ ಹಲವಾರು ಬಾರಿ ಮನವಿ ಮಾಡಿದರೂ ಕ್ರಮಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿದರು.

ಜಿಎಸ್‌ಟಿ ನಿಯಮದಂತೆ 2017ರ ಜೂನ್ 30ರವರೆಗಿನ ವ್ಯಾಟ್ ಅವಧಿಯ ಎಲ್ಲ ಕಾಮಗಾರಿಗಳ ಬಿಲ್‌ಗಳ ಹಣವನ್ನು ಕೂಡಲೇ ಪಾವತಿಸಬೇಕು ಎಂದ ಅವರು, ಪಾಲಿಕೆಯಲ್ಲಿ ಕಾಮಗಾರಿಗಳನ್ನು ಪ್ಯಾಕೇಜ್‌ಗಳ ಮೂಲಕ ಟೆಂಡರ್ ಕರೆಯುವುದನ್ನು ಕೂಡಲೇ ನಿಲ್ಲಸಬೇಕು ಎಂದು ಒತ್ತಾಯಿಸಿದರು.

ಮುಂದೆ ಪ್ಯಾಕೇಜ್ ಟೆಂಡರ್ ನೀಡದಿರುವ ಬಗ್ಗೆ ಸೂಕ್ತ ನಿಯಮಗಳನ್ನು ರೂಪಿಸಬೇಕು ಮತ್ತು ಸರ್ಕಾರದ ಅನುದಾನದ ಕಾಮಗಾರಿಗಳನ್ನು ಯಾವುದೇ ಕಾರಣಕ್ಕೂ ಕೆಆರ್‌ಐಡಿಎಲ್‌ಗೆ ನೀಡಬಾರದು ಎಂದು ಆಗ್ರಹಿಸಿದರು.

ಭರವಸೆ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿ ಮಹದೇವ್, ಮಾರ್ಚ್ ತಿಂಗಳೊಳಗೆ 2016ರ ಸೆಪ್ಟೆಂಬರ್‌ವರೆಗೆ ನಡೆಸಲಾಗಿರುವ ಕಾಮಗಾರಿಗಳ ಬಿಲ್ ಪಾವತಿಸುವ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News